bagalkot

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಬಾಗಲಕೋಟೆ ರೈತರು: ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತಲು ಮುಂದಾದ ಅನ್ನದಾತರು!

Share

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರೇ ಪಾಠ ಕಲಿಸಿದ್ದಾರೆ. ಅಧಿಕಾರಿಗಳು ಕಾಲುವೆ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ, ರೈತರು ತಾವೇ ಸ್ವಯಂಪ್ರೇರಿತರಾಗಿ ಹಣ ಸಂಗ್ರಹಿಸಿ ಜೆಸಿಬಿ ಮೂಲಕ ಕಾಲುವೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಳಕಲ್ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ಸಣ್ಣ ನೀರಾವರಿ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಜಮೀನುಗಳಿಗೆ ನೀರು ಹರಿಯದೆ ಬೆಳೆಗಳು ಒಣಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದಿದ್ದಾಗ, ಆಕ್ರೋಶಗೊಂಡ ರೈತರು ಇಲಾಖೆಯ ಕೆಲಸವನ್ನು ತಾವೇ ಕೈಗೆತ್ತಿಕೊಂಡಿದ್ದಾರೆ. ಇಡೀ ಗ್ರಾಮಸ್ಥರಿಂದ ಸುಮಾರು ₹1 ಲಕ್ಷದಷ್ಟು ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿರುವ ಅನ್ನದಾತರು, ಜೆಸಿಬಿ ಯಂತ್ರಗಳನ್ನು ತರಿಸಿ ಕಾಲುವೆ ಸ್ವಚ್ಛತಾ ಕಾರ್ಯವನ್ನು ಸಮರೋಪಾದಿಯಲ್ಲಿ ಆರಂಭಿಸಿದ್ದಾರೆ. ಸರ್ಕಾರದ ನಯಾಪೈಸೆ ನೆರವಿಲ್ಲದೆ ನೀರಾವರಿ ಸಮಸ್ಯೆಗೆ ತಾವೇ ಸ್ವಯಂಪ್ರೇರಿತವಾಗಿ ಮುನ್ನಡೆದು ಪರಿಹಾರ ಕಂಡುಕೊಳ್ಳುತ್ತಿರುವ ರೈತರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Tags:

error: Content is protected !!