Chikkodi

ಕೃಷ್ಣಾ ನದಿ ಖಾಲಿ ಖಾಲಿ,ಚಿಕ್ಕೋಡಿಯಲ್ಲಿ ಜೀವ ಜಲಕ್ಕಾಗಿ ಹಾಹಾಕಾರ

Share

ಅನ್ನದಾತನ ಜೀವನಾಡಿ ಕೃಷ್ಣಾ ನದಿ ಈಗ ಸಂಪೂರ್ಣವಾಗಿ ಬತ್ತಿ ಹೋಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿ ಖಾಲಿಯಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಈಗ ಜಲಕ್ಷಾಮದ ಭೀತಿ ಎದುರಾಗಿದೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ನದಿಗೆ ನೀರು ಹರಿಸುವಂತೆ ಸಾರ್ವಜನಿಕರು ಹಾಗೂ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತಂತೆ ಒಂದು ವರದಿ ಇಲ್ಲಿದೆ

ಬೆಳಗಾವಿ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ನದಿ ಈಗ ಸಂಪೂರ್ಣವಾಗಿ ಒಣಗಿ ಮರಳುಗಾಡಿನಂತಾಗಿದೆ. ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ನದಿ ಖಾಲಿಯಾಗುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ನದಿಯನ್ನೇ ನಂಬಿಕೊಂಡಿದ್ದ ಯಡೂರ, ಕಲ್ಲೋಳ, ಮಾಂಜರಿ, ಚಂದೂರ, ಅಂಕಲಿ, ಬಾವನ ಸೌಂದತ್ತಿ ಹಾಗೂ ದಿಗ್ಗೆವಾಡಿ ಸೇರಿದಂತೆ ಹತ್ತಾರು ಗ್ರಾಮಗಳ ಜನರಿಗೆ ಈಗ ಕುಡಿಯುವ ನೀರಿನ ಆಹಾಕಾರ ಶುರುವಾಗುವ ಭೀತಿ ಎದುರಾಗಿದೆ.

ಕೇವಲ ಕುಡಿಯುವ ನೀರಷ್ಟೇ ಅಲ್ಲ, ನದಿ ನೀರನ್ನೇ ನಂಬಿ ಬೆಳೆ ಬೆಳೆದಿದ್ದ ರೈತರು ಈಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಕೃಷ್ಣಾ ನದಿ ಪಾತ್ರದ ಯಡೂರ, ಕಲ್ಲೋಳ, ಮಾಂಜರಿ, ಚಂದೂರ ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಇತ್ತ ಜಾನುವಾರುಗಳಿಗೂ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆ ಉಂಟಾಗಿದೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾಲೂಕಿನ ಇತರೆ ಗ್ರಾಮಗಳಿಗೂ ಜಲಕ್ಷಾಮ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು, ಮಹಾರಾಷ್ಟ್ರ ಸರ್ಕಾರದಿಂದ ಅಥವಾ ಕಾಯ್ದಿಟ್ಟ ಜಲಾಶಯದಿಂದ ಕೃಷ್ಣಾ ನದಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಒಟ್ಟಿನಲ್ಲಿ ಚಿಕ್ಕೋಡಿ ತಾಲೂಕಿನಾದ್ಯಂತ ಕೃಷ್ಣಾ ನದಿ ಬತ್ತಿ ಹೋಗಿರುವುದು ಇಡೀ ಭಾಗದ ಜನರನ್ನು ಆತಂಕಕ್ಕೆ ತಳ್ಳಿದೆ. ಇನ್ನಾದರೂ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಜನರ ಕುಡಿಯುವ ನೀರು ಮತ್ತು ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!