ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿಪ್ಪಾಣಿ ತಾಲೂಕಿನ ಕೊನೂರು-ಬೆನಾಡಿ ರಸ್ತೆಯ ಕೋರೆ ಪೌಲ್ಟ್ರಿ ಫಾರ್ಮ್ ಬಳಿ ಸಂಭವಿಸಿದೆ.

ಕೊನೂರು ಗ್ರಾಮದ ನಿವಾಸಿ ಮಹಾವೀರ ಅಪ್ಪಾಸೊ ಮಗದುಮ್ಮ (65) ಮೃತಪಟ್ಟ ದುರ್ದೈವಿ.ಮಹಾವೀರ ಅವರು ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಕೆಲಸದ ನಿಮಿತ್ತ ಕೊನೂರಿನಿಂದ ಬೆನಾಡಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕೋರೆ ಪೌಲ್ಟ್ರಿ ಫಾರ್ಮ್ ಹತ್ತಿರ ಬರುತ್ತಿದ್ದಂತೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಇವರ ಬೈಕ್ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಮಹಾವೀರ ಅವರು ನಿಪ್ಪಾಣಿಯಿಂದ ಸಿದ್ಧಗಿರಿ ಹಾಗೂ ಕೊಲ್ಲಾಪುರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಎಸಗಿದ ವಾಹನದ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಉಮೇಶ ಮಗದುಮ್ಮ ನೀಡಿದ ದೂರಿನನ್ವಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವಾಹನ ಮತ್ತು ಅದರ ಚಾಲಕನ ವಿರುದ್ಧ ‘ಹಿಟ್ ಅಂಡ್ ರನ್’ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಪೊಲೀಸ್ ಉಪನಿರೀಕ್ಷಕ (PSI) ಶಿವರಾಜ್ ನಾಯಕವಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
