Vijaypura

ವಿಶ್ವ ಯೋಗ ದಿನ: ವಿಜಯಪುರದಲ್ಲಿ ಜಲಯೋಗದ ವಿಶಿಷ್ಟ ಸಾಧನೆ

Share

“ಆರೋಗ್ಯವೇ ಭಾಗ್ಯ”, “ಆರೋಗ್ಯ ಇದ್ದರೆ ಅಷ್ಟೈಶ್ವರ್ಯ” ಎಂಬ ಮಾತುಗಳು ಕೇವಲ ಗಾದೆಗಳಲ್ಲ, ಬದುಕಿನ ಸತ್ಯಗಳು. ವಿಶ್ವ ಯೋಗ ದಿನದಂದು ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಯೋಗಾಭ್ಯಾಸದಲ್ಲಿ ತೊಡಗಿದ್ದರೆ, ವಿಜಯಪುರದಲ್ಲಿ ಪತ್ರಕರ್ತ ಸುನಿಲ್ ಗೋಡೆನವರ್ ಮತ್ತು ಅವರ ಇಬ್ಬರು ಪುತ್ರರು ನೀರನ್ನೇ ಯೋಗಪೀಠವನ್ನಾಗಿ ಮಾಡಿಕೊಂಡು ವಿಶಿಷ್ಟ ಜಲಯೋಗ ಪ್ರದರ್ಶಿಸಿದ್ದಾರೆ. ದೇಹದ ಸಮತೋಲನ, ಮನಸ್ಸಿನ ಏಕಾಗ್ರತೆ ಹಾಗೂ ಆರೋಗ್ಯದ ಸಂದೇಶವನ್ನು ನೀರಿನ ಅಲೆಗಳ ಮೇಲೆಯೇ ಮೂಡಿಸಿರುವ ಈ ಕುಟುಂಬದ ಅಪರೂಪದ ಸಾಧನೆ ಕುರಿತು ಒಂದು ವಿಶೇಷ ವರದಿ.

ನೀರಿನ ನೀಲಿಮೆಯ ನಡುವೆ…
ಅಲೆಗಳ ಮಡಿಲಲ್ಲಿ…
ತೇಲುತ್ತಲೇ ಧ್ಯಾನದಲ್ಲಿ ಮಗ್ನರಾಗಿರುವ ಈ ದೃಶ್ಯಗಳು ಕಣ್ಣಿಗೆ ಹಬ್ಬದಂತಿವೆ…
ಇದು ಸಾಮಾನ್ಯ ಯೋಗವಲ್ಲ…
ಇದು ದೇಹ ಮತ್ತು ಮನಸ್ಸಿನ ನಡುವಿನ ಅದ್ಭುತ ಸಮನ್ವಯದ ಪ್ರತೀಕವಾದ ಜಲಯೋಗ.
ವಿಶ್ವ ಯೋಗ ದಿನದ ಅಂಗವಾಗಿ ವಿಜಯಪುರದ ಪತ್ರಕರ್ತ ಸುನಿಲ್ ಗೋಡೆನವರ್ ಹಾಗೂ ಅವರ ಮಕ್ಕಳಾದ ಸಾತ್ವಿಕ್ ಮತ್ತು ಋತ್ವಿಕ್, ನೀರಿನಲ್ಲೇ ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಯೋಗ ನೆಲದ ಮೇಲೆ ಅರಳುವ ಕಮಲವಾದರೆ, ಜಲಯೋಗ ನೀರಿನ ಮೇಲೆ ಅರಳುವ ಅಪರೂಪದ ಕಮಲದಂತೆ.
ನೀರಿನಲ್ಲೇ ಸಮತೋಲನ ಕಾಪಾಡಿಕೊಂಡು ಪದ್ಮಾಸನ, ಉತ್ಕಟಾಸನ, ಶವಾಸನ ಸೇರಿದಂತೆ ಹಲವು ಆಸನಗಳನ್ನು ಮಾಡುವ ಈ ಕುಟುಂಬ, ಯೋಗದ ನಿಜವಾದ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಅಲೆಗಳು ಅಡ್ಡ ಬಂದರೂ ಏಕಾಗ್ರತೆ ತಪ್ಪುವುದಿಲ್ಲ.
ನೀರು ಚಲಿಸಿದರೂ ಮನಸ್ಸು ಚಂಚಲವಾಗುವುದಿಲ್ಲ.
ಅದರ ಜೊತೆಗೆ ನೀರಿನಲ್ಲೇ ಪ್ರಾಣಾಯಾಮ ಅಭ್ಯಾಸ ಮಾಡುವ ಮೂಲಕ ಉಸಿರಾಟದ ನಿಯಂತ್ರಣ, ಮನಸ್ಸಿನ ಶಾಂತಿ ಹಾಗೂ ದೈಹಿಕ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತಿದ್ದಾರೆ.

ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುವ ಈ ಕುಟುಂಬಕ್ಕೆ ಯೋಗ ಕೇವಲ ವ್ಯಾಯಾಮವಲ್ಲ, ಅದು ಬದುಕಿನ ಶಿಸ್ತು. ಯೋಗ ಇವರಿಗೆ ಅಭ್ಯಾಸ ಮಾತ್ರವಲ್ಲ, ಜೀವನದ ದಾರಿದೀಪ.
ಜಲಯೋಗದಿಂದ ದೇಹದ ಸಮತೋಲನ ಹೆಚ್ಚುತ್ತದೆ.
ಮನಸ್ಸು ಕನ್ನಡಿಯಂತೆ ನಿರ್ಮಲವಾಗುತ್ತದೆ. ಒತ್ತಡ ನೀರಿನಲ್ಲಿ ಕರಗಿದ ಉಪ್ಪಿನಂತೆ ಮಾಯವಾಗುತ್ತದೆ. ಆತ್ಮವಿಶ್ವಾಸ ಬೆಟ್ಟದಂತೆ ಎತ್ತರಗೊಳ್ಳುತ್ತದೆ.
ಇಂದಿನ ಯುವಜನತೆ ಮೊಬೈಲ್, ಒತ್ತಡ ಮತ್ತು ದುಶ್ಚಟಗಳ ಸುಳಿಯಲ್ಲಿ ಸಿಲುಕುತ್ತಿರುವ ಸಂದರ್ಭದಲ್ಲಿ, ಈ ಕುಟುಂಬ ಆರೋಗ್ಯಕರ ಜೀವನಶೈಲಿಯ ಮೂಲಕ ಮಾದರಿಯಾಗಿದೆ.

ಈಜು, ಯೋಗ ಮತ್ತು ಪ್ರಾಣಾಯಾಮ—ಈ ಮೂರರ ಸಂಗಮವೇ ಇವರ ಜಲಯೋಗ.
ಹಾಗೆ ನೋಡಿದರೆ ಇದು ಮೂರು ನದಿಗಳು ಸೇರಿ ಸಂಗಮ ವಾಗುವಂತೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಸಾಧನೆ.
ವಿಶ್ವ ಯೋಗ ದಿನದಂದು ಸಾವಿರಾರು ಜನರು ನೆಲದ ಮೇಲೆ ಯೋಗ ಮಾಡಿದರೆ, ವಿಜಯ ಪುರದ ಈ ಕುಟುಂಬ ನೀರಿನ ಮೇಲೆಯೇ ಯೋಗದ ಮಹತ್ವವನ್ನು ಸಾರಿದೆ.
ಯೋಗಕ್ಕೆ ವಯಸ್ಸಿನ ಮಿತಿ ಇಲ್ಲ, ಪರಿಸ್ಥಿತಿಯೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದೆ.
“ಆರೋಗ್ಯವೇ ನಿಜವಾದ ಸಂಪತ್ತು” ಎಂಬ ಸಂದೇಶವನ್ನು ಅಲೆಗಳ ಮೇಲೆಯೇ ಬರೆದು ತೋರಿಸಿರುವ ಈ ಕುಟುಂಬದ ಸಾಧನೆ, ವಿಶ್ವ ಯೋಗ ದಿನಕ್ಕೆ ಮತ್ತಷ್ಟು ವಿಶೇಷ ಮೆರುಗು ತಂದಿದೆ.

ಅಲೆಗಳ ನಡುವೆ ತೇಲುತ್ತಾ…ನೀರಿನಲ್ಲೇ ಧ್ಯಾನದಲ್ಲಿ ಲೀನವಾಗಿರುವ ಈ ದೃಶ್ಯಗಳು ಸಾಮಾನ್ಯವಲ್ಲ… ವಿಶ್ವ ಯೋಗ ದಿನದ ಅಂಗವಾಗಿ ವಿಜಯಪುರದ ಪತ್ರಕರ್ತ ಸುನಿಲ್ ಗೋಡೆನವರ್ ಹಾಗೂ ಮಕ್ಕಳಾದ ಸಾತ್ವಿಕ್ ಮತ್ತು ಋತ್ವಿಕ್ ಜಲಯೋಗ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಯೋಗ ನೆಲದ ಮೇಲೆ ನಡೆಯುತ್ತದೆ. ಆದರೆ ಈ ಕುಟುಂಬ ನೀರಿನಲ್ಲೇ ಸಮತೋಲನ ಕಾಪಾಡಿಕೊಂಡು ವಿವಿಧ ಆಸನಗಳನ್ನು ಮಾಡುವ ಮೂಲಕ ತಮ್ಮ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಿದೆ. ಪದ್ಮಾಸನ, ಶವಾಸನ, ಉತ್ಕಟಾಸನ ಸೇರಿದಂತೆ ಹಲವು ಆಸನಗಳನ್ನು ನೀರಿನಲ್ಲೇ ಅಭ್ಯಾಸ ಮಾಡುವುದು ಸುಲಭದ ಮಾತಲ್ಲ. ದೇಹದ ನಿಯಂತ್ರಣ, ಉಸಿರಾಟದ ಸಮತೋಲನ ಮತ್ತು ಮನಸ್ಸಿನ ಏಕಾಗ್ರತೆ ಇದ್ದಾಗ ಮಾತ್ರ ಇದು ಸಾಧ್ಯ.

ಆರೋಗ್ಯವೇ ಸಂಪತ್ತು ಎಂಬ ಗಾದೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಈ ಕುಟುಂಬ, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುತ್ತಿದೆ. ನೀರಿನಲ್ಲೇ ಯೋಗ ಮಾಡುವುದರಿಂದ ದೇಹದ ಸಮತೋಲನ ಹೆಚ್ಚುವುದರ ಜೊತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂಬುದು ಇವರ ಅನುಭವ. ಇಂದಿನ ಯುವಜನತೆ ಒತ್ತಡ, ದುಶ್ಚಟ ಮತ್ತು ಅನಾರೋಗ್ಯಕರ ಜೀವನಶೈಲಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಈ ಕುಟುಂಬ ಯೋಗದ ಮೂಲಕ ಆರೋಗ್ಯಕರ ಬದುಕಿನ ಸಂದೇಶ ನೀಡುತ್ತಿದೆ. ನೀರು, ಉಸಿರು ಮತ್ತು ಯೋಗದ ಸಂಗಮವಾಗಿ ಮೂಡಿರುವ ಜಲಯೋಗ, ದೇಹವನ್ನು ಸದೃಢಗೊಳಿಸುವುದರ ಜೊತೆಗೆ ಆತ್ಮವಿಶ್ವಾಸವನ್ನೂ ವೃದ್ಧಿಸುತ್ತದೆ.ವಿಶ್ವ ಯೋಗ ದಿನದಂದು ಸಾವಿರಾರು ಜನರು ನೆಲದ ಮೇಲೆ ಯೋಗ ಮಾಡಿದರೆ, ವಿಜಯಪುರದ ಈ ಕುಟುಂಬ ನೀರಿನಲ್ಲೇ ಯೋಗ ಮಾಡಿ ವಿಶಿಷ್ಟತೆ ಮೆರೆದಿದೆ. ಯೋಗಕ್ಕೆ ಸ್ಥಳ, ವಯಸ್ಸು ಅಥವಾ ಪರಿಸ್ಥಿತಿಯ ಮಿತಿ ಇಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದೆ. “ಯೋಗ ದೇಹಕ್ಕೆ ಶಕ್ತಿ ನೀಡಿದರೆ, ಜಲಯೋಗ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿಶ್ವ ಯೋಗ ದಿನದಂದು ವಿಜಯಪುರದ ಈ ಕುಟುಂಬದ ಜಲಯೋಗ ಪ್ರದರ್ಶನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಯುವಜನತೆಗೆ ಸ್ಫೂರ್ತಿಯಾಗಿದೆ.”

ಒಟ್ನಲ್ಲಿ ಯೋಗ ಜೀವನದ ಒಂದು ಅಭ್ಯಾಸ ಮಾತ್ರವಲ್ಲ, ಅದು ಆರೋಗ್ಯಕರ ಬದುಕಿನ ಮಾರ್ಗ. ಅಲೆಗಳ ಮೇಲೆಯೇ ಆರೋಗ್ಯದ ಸಂದೇಶ ಬರೆದ ವಿಜಯಪುರದ ಈ ಕುಟುಂಬ, ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ

Tags:

error: Content is protected !!