: ಬೆಳಗಾವಿಯ ಶ್ರೀನಗರದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ಇಂದು ನಾಯಿಗಳ ಹಿಂಡು ದಾಳಿ ನಡೆಸಿ ಗೋವೊಂದನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯ ಶ್ರೀನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಇಂದು ನಾಯಿ ಕಡಿತದಿಂದಾಗಿ ಗೋವೊಂದು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಗೋರಕ್ಷಕರನ್ನು ಸಂಪರ್ಕಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಗೋರಕ್ಷಕ ತಂಡದ ನಿಲೇಶ್, ಪ್ರಕಾಶ್ ಲಾಡವಾ, ಶ್ರೀನಿವಾಸ್, ಪ್ರಶಾಂತ್, ಗುರು ಕಿರಣ್, ಚೇತನ್, ಗುರುಶರಣ್ ಹಾಗೂ ಕುನಾಲ್ ಅವರು ಸ್ಥಳಕ್ಕೆ ಧಾವಿಸಿ ಮೃತ ಗೋವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಹಿಂದೆಯೂ ಬೀದಿ ನಾಯಿಗಳ ಅಟ್ಟಹಾಸ ತಪ್ಪಿಸುವಂತೆ ಮಹಾನಗರ ಪಾಲಿಕೆಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಾಪಾಲಿಕೆ ಅಧಿಕಾರಿಗಳು ತಕ್ಷಣವೇ ಬೀದಿ ನಾಯಿಗಳ ಬಂದೋಬಸ್ತ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

