ಬೆಳಗಾವಿ ತಾಲೂಕಿನ ಅಲತಗೆಯ ಬ್ರಹ್ಮಲಿಂಗೇಶ್ವರ ಮಾಧ್ಯಮಿಕ ಶಾಲೆಯ ಜಿರ್ಣಾವಸ್ಥೆಯಲ್ಲಿರುವ ಕಟ್ಟಡದ ದುರಸ್ತಿಗಾಗಿ ಧನಸಹಾಯ ಕೋರಿ ಶಾಲಾ ಸಮಿತಿಯ ಪದಾಧಿಕಾರಿಗಳು ಪ್ರಮುಖ ಉದ್ಯಮಿ ಅನಿಲ್ ಪೋತ್ದಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಳೆಗಾಲದಲ್ಲಿ ಸೋರುತ್ತಿರುವ ಶಾಲಾ ಕೊಠಡಿಗಳಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಎದುರಾಗಿರುವ ಆತಂಕವನ್ನು ನಿವಾರಿಸಲು ಈ ತುರ್ತು ಕ್ರಮ ಕೈಗೊಳ್ಳಲಾಗಿದೆ.
ಅಲತಗೆಯ ಬ್ರಹ್ಮಲಿಂಗೇಶ್ವರ ಹೈಸ್ಕೂಲ್ ಕಟ್ಟಡವು ಅತ್ಯಂತ ಹಳೆಯದಾಗಿದ್ದು, ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಯ ಸ್ಲ್ಯಾಬ್ ದುರಸ್ತಿ, ಪತ್ರಾಸ್ ಅಳವಡಿಕೆ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಮಹಾರಾಷ್ಟ್ರ ಸರ್ಕಾರದಿಂದ ಧನಸಹಾಯ ಪಡೆಯಲು ಶಾಲಾ ಸಮಿತಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಖ್ಯಾತ ಉದ್ಯಮಿ ಶ್ರೀಮಾನ್ ಅನಿಲ್ ಪೋತ್ದಾರ್ ಅವರನ್ನು ಪದಾಧಿಕಾರಿಗಳು ಭೇಟಿಯಾದಾಗ, ಅವರು ತಕ್ಷಣವೇ ಚಂದಗಡ ಶಾಸಕ ಶಿವಾಜಿರಾವ್ ಪಾಟೀಲ್ ಅವರಿಗೆ ದೂರವಾಣಿ ಕರೆ ಮಾಡಿ ಸರ್ಕಾರಿ ನೆರವು ಕೊಡಿಸುವಂತೆ ವಿನಂತಿಸಿದರು. ಜೊತೆಗೆ ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿಯೂ ಧನಸಹಾಯ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರ್ಮನ್ ಚಂದ್ರಕಾಂತ್ ಧುಡುಮ್, ಮಾಜಿ ಗ್ರಾ.ಪಂ. ಸದಸ್ಯ ಚೇತಕ್ ಕಾಂಬ್ಳೆ, ಉಮೇಶ್ ಚೌಗುಲೆ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

