ಜಿನಭಕ್ತರ ಪ್ರಸಿದ್ಧ ಪುಣ್ಯಕ್ಷೇತ್ರವಾದ ಚಿಕ್ಕೋಡಿ ತಾಲೂಕಿನ ಕೋಥಳಿ-ಕುಪ್ಪಾನವಾಡಿಯ ಶಾಂತಿಗಿರಿಯಲ್ಲಿ ಮೂಲನಾಯಕ 1008 ಶಾಂತಿನಾಥ ಹಾಗೂ ಚಂದ್ರಪ್ರಭು ಭಗವಾನ್, ಮಹಾವೀರ ಭಗವಾನರವರ ಮೂರ್ತಿಗಳಿಗೆ ಮಹಾ ಮಸ್ತಕಾಭಿಷೇಕವು ಅತ್ಯಂತ ಭಕ್ತಿ-ಭಾವ ಹಾಗೂ ಸಡಗರದಿಂದ ನೆರವೇರಿತು.

ಬೆಳಗ್ಗೆ ಮಂಗಳ ನಿನಾದದೊಂದಿಗೆ ಜಿನಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಪ್ರಮುಖವಾಗಿ ಮಹಾಶಾಂತಿಧಾರಾ ಪೂಜೆ ಜರುಗಿತು. ಖ್ಯಾತ ನ್ಯಾಯವಾದಿ ಪಿ. ಆರ್. ಪಾಟೀಲ ಅವರು ಧರ್ಮಧ್ವಜಾರೋಹಣ ನೆರವೇರಿಸಿದರು. ತದನಂತರ ಭಕ್ತಾದಿಗಳಿಂದ ಭಕ್ತಿಪೂರ್ವಕವಾಗಿ ಪಂಚಾಮೃತ ಅಭಿಷೇಕ ಹಾಗೂ ಜಿನವಾಣಿ ಕಾರ್ಯಕ್ರಮಗಳು ಜರುಗಿದವು. ಬಳಿಕ ಕೋಥಳಿ ಗ್ರಾಮದಿಂದ ಶಾಂತಿಗಿರಿಯವರೆಗೆ ಅಶ್ವ ರಥದೊಂದಿಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.


ಮೆರವಣಿಗೆಯ ನಂತರ ಧರ್ಮ ಸಭಾಗೃಹದಲ್ಲಿ ವಿನಯಾಂಜಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರಾಷ್ಟ್ರಸಂತ ಗುಣಧರನಂದಿ ಮುನಿಗಳು, ಆಚಾರ್ಯ ಶ್ರೀ ಶಾಂತಿಸೇನ ಮುನಿಗಳು, ನಾಂದಣಿಯ ಜಿನಸೇನ ಭಟ್ಟಾರಕರು, ಕೊಲ್ಲಾಪುರದ ಲಕ್ಷ್ಮಿಸೇನ ಭಟ್ಟಾರಕರು ಹಾಗೂ ಚಿಂಚಣಿ ಸಿದ್ದಸಂಸ್ಥಾನ ಮಠದ ಶಿವಪ್ರಸಾದ ದೇವರು ವಹಿಸಿ ಆಶೀರ್ವಚನ ನೀಡಿದರು.

ಗಣ್ಯರಾದ ಪಿ.ಆರ್. ಪಾಟೀಲ, ಜಯಕುಮಾರ ಉಪಾಧ್ಯೆ, ತಾತ್ಯಾಸಾಹೇಬ ಪಾಟೀಲ, ಪಾಸಗೌಡಾ ಪಾಟೀಲ, ಸಂದೀಪ ಪಾಟೀಲ ಹಾಗೂ ಉಪಸ್ಥಿತರಿದ್ದ ಜಿನಭಕ್ತರು ಜಂಟಿಯಾಗಿ ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಧಾರ್ಮಿಕ ಮಹೋತ್ಸವದಲ್ಲಿ ಶ್ರೀ 108 ಆಚಾರ್ಯ ರತ್ನ ದೇಶಭೂಷಣ ದಿಗಂಬರ ಜೈನ ಶಾಂತಿಗಿರಿ ಟ್ರಸ್ಟ್ (ಕೋಥಳಿ-ಕುಪ್ಪನವಾಡಿ) ಅಧ್ಯಕ್ಷ ಪದ್ಮಾಕರ ಪಾಟೀಲ, ಕಾರ್ಯದರ್ಶಿ ಪಾಸಗೌಡ ಪಾಟೀಲ, ಅಡ್ವೊಕೇಟ್ ಶ್ರೀಪಾಲ ಮುನ್ನೋಳಿ, ಖಜಾಂಚಿ ಪಾಯಗೌಡ ಖೋತ, ಪ್ರಮುಖರಾದ ಸಾಹು ಜೈನ್, ನಿತಿನ್ ಗಾಂಧಿ, ಕಿರಣ ಪಾಟೀಲ, ಕಲ್ಲಪ್ಪ ಮಗೇನ್ನವರ, ತಾತ್ಯಾಸಾಹೇಬ ಪಾಟೀಲ, ಅಣ್ಣಾಗೌಡ ಪಾಟೀಲ, ಬಾಲಗೌಡ ಪಾಟೀಲ, ಭೌಸಾಹೇಬ ಪಾಟೀಲ, ಸಂದೀಪ ಪಾಟೀಲ, ತಾತ್ಯಾಸಾಹೇಬ ಖೋತ, ಬಾಹುಬಲಿ ಖೋತ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಜೈನ ಸಮುದಾಯದ ಪ್ರಮುಖ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಂಕರರ ಕೃಪೆಗೆ ಪಾತ್ರರಾದರು.
