ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳ ಗುಂಪು ತಲವಾರ್‌ಗಳಿಂದ ಭೀಕರ ದಾಳಿ ನಡೆಸಿರುವ ಘಟನೆ ನಡೆದಿದೆ.
ಮಾಜಿ ಯೋಧನಾಗಿರುವ ಮಾರುತಿ ಕ್ಷತ್ರಿ ಎಂಬುವರ ಮೇಲೆ ಈ ದಾಳಿ ನಡೆದಿದ್ದು, ದಾಳಿಯ ವೇಳೆ ಅವರ ಎಡಗೈಗೆ ಗಂಭೀರ ಗಾಯವಾಗಿದ್ದು, ಕೈ ಕಟ್ ಆಗಿರುವುದಾಗಿ ತಿಳಿದುಬಂದಿದೆ.

ಇಂಡಿ ಪಟ್ಟಣದ ಡಿಎಸ್ಪಿ ಕಚೇರಿ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿದ್ದ ಮಾರುತಿ ಕ್ಷತ್ರಿ ಅವರ ಮೇಲೆ ಅಪರಿಚಿತರು ಏಕಾಏಕಿ ತಲವಾರ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಕೊಲೆಗೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ದಾಳಿಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಮಾರುತಿ ಕ್ಷತ್ರಿ ಅವರು ಬಡ್ಡಿ ದಂಧೆ ನಡೆಸುತ್ತಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಈ ವಿಚಾರವೂ ತನಿಖೆಯ ಭಾಗವಾಗಿದೆ. ಆದರೆ, ದಾಳಿಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಇಂಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಾರುತಿ ಕ್ಷತ್ರಿ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಪೊಲೀಸರು ದಾಳಿಕೋರರ ಪತ್ತೆಗೆ ಮುಂದಾಗಿದ್ದು, ತನಿಖೆ ಮುಂದುವರಿದಿದೆ.
