ಮೊಬೈಲ್ ನೀಡಲು ನಿರಾಕರಿಸಿದ ಕಾರಣಕ್ಕೆ ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬಳು ಯುವಕನನ್ನು ಚಾಕುವಿನಿಂದ ಇರಿದು ಕೊಂದ ಭೀಕರ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಆರೋಪಿ ಮಹಿಳೆಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಕಳೆದ 2023ರ ಏಪ್ರಿಲ್ 30ರಂದು ರಾತ್ರಿ ಕೀರ್ತಿ ಹೋಟೆಲ್ ಸಮೀಪದ ಢೋರ್ ಗಲ್ಲಿ ಕ್ರಾಸ್ ಬಳಿ ನಾಗರಾಜ ಭೀಮಶಿ ರಾಗಿಪಾಟೀಲ ಎಂಬಾತ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಮದ್ಯದ ಅಮಲಿನಲ್ಲಿದ್ದ ಜಯಶ್ರೀ ಪವನ ಪವಾರ ಎಂಬಾಕೆ ಮೊಬೈಲ್ ನೀಡುವಂತೆ ಕೇಳಿದ್ದಳು. ಈ ವೇಳೆ ನಡೆದ ವಾಗ್ವಾದದಲ್ಲಿ ಜಯಶ್ರೀ ತನ್ನ ಬಳಿಯಿದ್ದ ಚಾಕುವಿನಿಂದ ನಾಗರಾಜನ ಎದೆಗೆ ಇರಿದು ಕೊಂದಿದ್ದಳು. ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪಿಐ ಪಾಲ್ ಪ್ರಿಯಕುಮಾರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಆರೋಪಿ ಜಯಶ್ರೀಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜೊತೆಗೆ ಮೃತನ ವಾರಸುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ನಾರಾಯಣ ಆರ್.ಇ ಅವರು ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೈಟ್

