ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಡಳಿತ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆರೋಪಿಸಿದರು.
ವಿಜಯಪುರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಮತ್ತು ಮೋದಿ ಅವರ ಆಡಳಿತವನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ನೆಹರು ಅವರು ದೇಶದ ಪ್ರಗತಿಗಾಗಿ ಬೃಹತ್ ಅಣೆಕಟ್ಟುಗಳು, ಸಾರ್ವಜನಿಕ ವಲಯದ ಕೈಗಾರಿಕೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಐಐಟಿ ಹಾಗೂ ಐಐಎಂನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಭಾರತವನ್ನು ಮುನ್ನಡೆಸಿದರು ಎಂದು ಹೇಳಿದರು.
ಆದರೆ ಮೋದಿ ಸರ್ಕಾರ ನೆಹರು ನಿರ್ಮಿಸಿದ ಸಾರ್ವಜನಿಕ ಸಂಸ್ಥೆಗಳು ಮತ್ತು ಕಾರ್ಖಾನೆಗಳನ್ನು ಖಾಸಗೀಕರಣ ಗೊಳಿಸುವ ಮೂಲಕ ದೇಶದ ಆಸ್ತಿಗಳನ್ನು ಮಾರಾಟ ಮಾಡುವ ಕೆಲಸ ಮಾಡಿದೆ ಎಂದು ಟೀಕಿಸಿದರು. ಇನ್ನೂ ಬೆಲೆ ಏರಿಕೆ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಗಳು ಮೋದಿ ಆಡಳಿತದ ಪ್ರಮುಖ ಕೊಡುಗೆಗಳಾಗಿವೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಮರ್ಪಕ ನಿರ್ವಹಣೆ ನೀಡಲು ವಿಫಲವಾಯಿತು. ನೋಟು ಅಮಾನ್ಯೀಕರಣದಂತಹ ನಿರ್ಧಾರಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ ಎಂದು ಆರೋಪಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಹರು ಅವರ ಅಲಿಪ್ತ ನೀತಿ ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ವಿದೇಶಾಂಗ ನೀತಿಯಲ್ಲಿ ನಿರೀಕ್ಷಿತ ಸಾಧನೆ ತೋರಿಲ್ಲ ಎಂದು ಅವರು ಹೇಳಿದರು. ಕಳೆದ 12 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರ ಸಮಸ್ಯೆಗಳಿಗಿಂತ ಕೆಲವೇ ಉದ್ಯಮಿಗಳ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ದೇಶದ ಬಡವರು, ರೈತರು ಮತ್ತು ನಿರ್ಗತಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
