State

ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಹೆಸರಲ್ಲಿ ನಿಲ್ಲಿಸುತ್ತಿಲ್ಲ… ಕೇವಲ ಅನರ್ಹರನ್ನಷ್ಟೇ ಕೈಬಿಡಲಾಗುತ್ತಿದೆ; ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ!

Share

ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿದೆ ಎಂಬ ವಿರೋಧ ಪಕ್ಷ ಬಿಜೆಪಿಯ ಟೀಕೆಗಳಿಗೆ ಸಚಿವ ಕೆ.ಜೆ. ಜಾರ್ಜ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಮೊದಲಿನಿಂದಲೂ ಸ್ವಾಗತಿಸಿಲ್ಲ ಎಂದು ಕಿಡಿಕಾರಿದ ಸಚಿವರು, ಕೇವಲ ಅನರ್ಹರನ್ನು ಮಾತ್ರ ಯೋಜನೆಗಳಿಂದ ಕೈಬಿಡಲಾಗುತ್ತಿದೆಯೇ ವಿನಃ ಯೋಜನೆಗಳನ್ನು ನಿಲ್ಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆಳಿಗೆ ಅವರು ಪ್ರತಿಕ್ರಿಯಿಸಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತಾಗಿ ಬಿಜೆಪಿಗರ ಟೀಕೆಗಳಿಗೆ ತೀವ್ರ ವಾಗ್ದಾಳಿ ನಡೆಸಿದ ಸಚಿವ ಕೆ.ಜೆ. ಜಾರ್ಜ್ ಅವರು, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಎಂದಿಗೂ ಸ್ವಾಗತಿಸಿಯೇ ಇಲ್ಲ ಮತ್ತು ಇವು ಯಶಸ್ವಿಯಾಗುವುದಿಲ್ಲ ಎನ್ನುವುದೇ ಅವರ ವಾದವಾಗಿತ್ತು ಎಂದು ನೆನಪಿಸಿದರು. ಪ್ರಸ್ತುತ ನಡೆಯುತ್ತಿರುವುದು ಯೋಜನೆಗಳ ಸ್ಥಗಿತವಲ್ಲ, ಬದಲಾಗಿ ಕೇವಲ ಅನರ್ಹರನ್ನು ಮಾತ್ರ ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, “ವಿರೋಧ ಪಕ್ಷದವರು ಅನರ್ಹರಿಗೂ ಯೋಜನೆಗಳನ್ನು ನೀಡಬೇಕು ಎಂದು ಹೇಳುತ್ತಿದ್ದಾರೆಯೇ? ಅರ್ಹರಲ್ಲದವರನ್ನು ಕೈಬಿಡುವುದರಲ್ಲಿ ತಪ್ಪೇನಿದೆ?” ಎಂದು ನೇರ ಪ್ರಶ್ನೆ ಹಾಕಿದರು.

ಇದೇ ವೇಳೆ ಗೃಹಜ್ಯೋತಿ ಯೋಜನೆಯ ಅನರ್ಹರ ಕುರಿತಾಗಿ ಮಾತನಾಡಿದ ಸಚಿವರು, ಈ ವಿಷಯದ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಂಡ ಬಳಿಕವೇ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

Tags:

error: Content is protected !!