ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳಿಂದ ಪೆಟ್ರೋಲ್ ಕದಿಯುವ ಖದೀಮರ ಗ್ಯಾಂಗ್ ಸಕ್ರಿಯವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪೊಲೀಸರ ರಾತ್ರಿ ಗಸ್ತಿನ ನಡುವೆಯೂ ಕಳ್ಳರು ಸರಣಿ ಕಳ್ಳತನಕ್ಕೆ ಇಳಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿ ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಿರುವ ಬಡಕಂಬಿ ತೋಟ ಹಾಗೂ ಶ್ರೀ ರಾಮಲಿಂಗ ಗುಡಿ ಹತ್ತಿರ ಈ ಘಟನೆ ನಡೆದಿದೆ. ತಡರಾತ್ರಿ ಸುಮಾರು 12:41 ರ ಸುಮಾರಿಗೆ ಬಂದ ಖದೀಮರು, ಮನೆಗಳ ಮುಂದೆ ಪಾರ್ಕ್ ಮಾಡಲಾಗಿದ್ದ ಬೈಕ್‌ಗಳ ಪೈಪ್‌ಗಳನ್ನು ಕಟ್ ಮಾಡಿ ಅತ್ಯಂತ ಚಾಣಾಕ್ಷತನದಿಂದ ಪೆಟ್ರೋಲ್ ಕದ್ದು ಪರಾರಿಯಾಗಿದ್ದಾರೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿಯೇ ಈ ಭಾಗದಲ್ಲಿ ನಡೆದಿರುವ ಮೂರನೇ ಪೆಟ್ರೋಲ್ ಕಳ್ಳತನ ಪ್ರಕರಣ ಇದಾಗಿದೆ. ಖದೀಮರು ಪೆಟ್ರೋಲ್ ಕದಿಯುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸದ್ಯ ಸೆರೆಯಾಗಿದ್ದು, ಕಳ್ಳರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ತಕ್ಷಣವೇ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಥಣಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.

