ಜನ ಸಾಮಾನ್ಯರ ಸ್ವಂತ ಮನೆಯ ಕನಸು ನನಸಾಗಿಸಬೇಕಿದ್ದ ಯೋಜನೆ ಈಗ ಅನಾಥ ಬಡಾವಣೆಯಾಗಿ ಮಾರ್ಪಟ್ಟಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮನೆಗಳು ಇಂದು ಬಾಗಿಲು, ಕಿಟಕಿಗಳಿಲ್ಲದೇ ಪಾಳು ಬಿದ್ದಿವೆ. ಜನರು ನೆಲೆಸಬೇಕಿದ್ದ ಪ್ರದೇಶ ಈಗ ಕಳ್ಳರ ಅಡ್ಡೆ, ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕರ್ನಾಟಕ ಗೃಹ ಮಂಡಳಿಯ ಮಹತ್ವಾಕಾಂಕ್ಷಿ ಯೋಜನೆಯ ದುಸ್ಥಿತಿಯ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ನಗರದ ಹೊರವಲಯದ ಕಸಬಾ-2 ಬಡಾವಣೆಯ ದೃಶ್ಯಗಳು ಇವು. ಎಲ್ಲರೂ ಸರಿ ಇದ್ದಿದ್ದರೆ ಜನರ ಕನಸಿನ ಮನೆಗಳ ಕನಸನ್ನು ನನಸಾಗುತ್ತಿತ್ತು. ಆದರೆ ಈಗ ಈ ಪ್ರದೇಶ ಭೂತ ಬಂಗಲೆಯಂತೆ ಕಾಣುತ್ತಿದೆ. ಸುಮಾರು 260 ಎಕರೆಗೂ ಅಧಿಕ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ಮನೆಗಳು ಹಾಗೂ ನಿವೇಶನಗಳನ್ನು ಅಭಿವೃದ್ಧಿಪಡಿಸಿತ್ತು. 2009-10ನೇ ಸಾಲಿನಲ್ಲಿಯೇ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರು ನಿವೇಶನ ಹಂಚಿಕೆಗೆ ಚಾಲನೆ ನೀಡಿದ್ದರು. ಆದರೆ 15 ವರ್ಷಗಳು ಕಳೆದರೂ ಇತ್ತ ಜನರು ಬರಲು ಭಯ ಭೀತರಾಗುತ್ತಿದ್ದಾರೆ. ಜನರಿಂದ ಕಂಗೊಳಿಸಬೇಕಿದ್ದ ಬಡಾವಣೆ ಇಂದು ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ. ಮನೆಗಳು ಹಾಳಾಗುತ್ತಿದ್ದು, ಸುತ್ತಮುತ್ತ ಮುಳ್ಳಿನ ಮುಳ್ಳು ಕಂಟಿಗಳು ಆವರಿಸಿವೆ. ಖಾಲಿ ಬಿದ್ದಿರುವ ಮನೆಗಳು ಮತ್ತು ನಿವೇಶನಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ನಿರ್ಜನ ವಾತಾವರಣದಿಂದಾಗಿ ಹಗಲು ಹೊತ್ತಿನಲ್ಲೇ ಜನರು ಈ ಪ್ರದೇಶಕ್ಕೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಸುರಕ್ಷಿತ ವಸತಿ ಪ್ರದೇಶವಾಗಬೇಕಿದ್ದ ಕಸಬಾ-2, ಇಂದು ಭಯ ಹುಟ್ಟಿಸುವ ಪ್ರದೇಶವಾಗಿ ಬದಲಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ…


ಇನ್ನೂ ಇಲ್ಲಿನ ಮೂಲಭೂತ ಸೌಕರ್ಯಗಳ ಸ್ಥಿತಿ ನೋಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೀದಿ ದೀಪಗಳ ತಂತಿಗಳು ಕಿತ್ತು ಹೋಗಿದ್ದು, ರಾತ್ರಿ ವೇಳೆಯಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದರೂ, ಜನರು ವಾಸಿಸಲು ಬೇಕಾದ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಇದರ ಪರಿಣಾಮವಾಗಿ ನಿವೇಶನ ಪಡೆದ ಅನೇಕರು ಇಲ್ಲಿ ಮನೆ ಕಟ್ಟಲು ಮುಂದಾಗದೇ ಬೇರೆ ಕಡೆ ನೆಲೆಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಕಸಬಾ-2 ಬಡಾವಣೆಯ ನಿರ್ವಹಣೆಯನ್ನು ಗೃಹ ಮಂಡಳಿಯಿಂದ ಪಾಲಿಕೆಗೆ ಹಸ್ತಾಂತರಿಸಿದೆ. ಆದರೆ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಗೃಹ ಮಂಡಳಿ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಂಡರೆ, ಪಾಲಿಕೆ ಅಧಿಕಾರಿಗಳು ಕೂಡ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದ್ದು, ಸಾರ್ವಜನಿಕ ಹಣ ವ್ಯರ್ಥವಾಗುತ್ತಿರುವ ಪ್ರಶ್ನೆ ಈಗ ಉದ್ಭವಿಸಿದೆ…
ಇನ್ನು ಮನೆಗಳ ಕಳಪೆ ನಿರ್ಮಾಣದ ಕುರಿತು ಕರ್ನಾಟಕ ಗೃಹ ಮಂಡಳಿಗೆ ಸಾಕಷ್ಟು ದೂರುಗಳನ್ನು ನೀಡಲಾಗಿದೆ. ಆದ್ರೇ, ಇಲ್ಲಿಯವರೆಗೆ ಯಾರ ಮೇಲೂ ಕ್ರಮ ಕೈಗೊಳ್ಳದಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಇತ್ತ ಮುಳ್ಳು ಕಂಟಿ ಬೆಳೆದು ನಿಂರ ಕಾರಣ ಹಗಲು ಹೊತ್ತಿನಲ್ಲಿ ಸಹಿತ ಆ ಕಡೆ ಹೋಗಲು ಭಯ ಭೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಮಂಡಳಿಯಿಂದ ಉಸ್ತುವಾರಿ ನೋಡಿಕೊಳ್ಳಲು ಪಾಲಿಕೆಗೆ ಹಸ್ತಾಂತರ ಮಾಡಿದರು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಈ ಕುರಿತು ಜಿಲ್ಲಾಧಿಕಾರಿ ಗಳು ಮುತ್ವರ್ಜಿ ವಹಿಸಿ ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
