BELAGAVI

ಬೆಳಗಾವಿಯ ಶಹಾಪೂರದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ 114ನೇ ವರ್ಷದ ಜನ್ಮೋತ್ಸವ: ಭಕ್ತಿಭಾವದ ಕುಂಭ ಮೆರವಣಿಗೆ, ಮಹಾಪ್ರಸಾದ

Share

ಬೆಳಗಾವಿ ನಗರದ ಶಹಾಪೂರದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಇಲ್ಲಿನ ಬಸವಣಗಲ್ಲಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಿಯ 114ನೇ ವರ್ಷದ ಜನ್ಮೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗಿದ್ದು, ನೂರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ದೇವಿಯ ಜಾತ್ರೆಯ ಪುಣ್ಯಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿರುವ ಪವಿತ್ರ ಪಾದುಕೆಗಳಿಗೆ ಮುಂಜಾನೆಯೇ ವಿಶೇಷ ಅಭಿಷೇಕವನ್ನು ನೆರವೇರಿಸುವುದರೊಂದಿಗೆ ಜನ್ಮೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಅಲ್ಲಿಂದ ಆರಂಭಗೊಂಡ ವೈಭವದ ಕುಂಭ ಮೆರವಣಿಗೆಯು ಗಣೇಶಪೂರ ಗಲ್ಲಿ ಹಾಗೂ ಬಸವಾಣ ಗಲ್ಲಿಯ ಮುಖ್ಯ ಮಾರ್ಗಗಳ ಮೂಲಕ ದೇವಸ್ಥಾನವನ್ನು ತಲುಪಿತು. ತದನಂತರ ಭಕ್ತರ ಜಯಘೋಷಗಳ ನಡುವೆ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ದೇವಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬುವ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭವ್ಯ ಮಹಾಆರತಿಯ ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಬೃಹತ್ ಮಟ್ಟದ ಮಹಾಪ್ರಸಾದ ವಿನಿಯೋಗವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ವೈಶಾಲಿ ಸುತಾರ್ ಅವರು, ಶ್ರೀ ಮಹಾಲಕ್ಷ್ಮೀ ದೇವಿಯ 114ನೇ ವರ್ಷದ ಜನ್ಮೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಆನಂದದ ಸಂಗತಿಯಾಗಿದೆ ಎಂದರು. ಕಳೆದ ಬಾರಿಗಿಂತಲೂ ಈ ಬಾರಿ ಅತ್ಯಂತ ಬೃಹತ್ ಮಟ್ಟದಲ್ಲಿ ಮಹಾಪ್ರಸಾದ ವ್ಯವಸ್ಥೆಯನ್ನು ಆಯೋಜಿಸುವ ಸೌಭಾಗ್ಯ ನಮಗೆ ದೊರೆತಿದೆ. ಆ ಜಗನ್ಮಾತೆಯು ಸಕಲ ಭಕ್ತಾದಿಗಳಿಗೂ ಆಯುಷ್ಯ, ಆರೋಗ್ಯ ಮತ್ತು ಸುಖ-ಸಂತೋಷವನ್ನು ನೀಡಿ ಕರುಣಿಸಲಿ ಎಂದು ಅವರು ಈ ವೇಳೆ ಹಾರೈಸಿದರು.

ಮತ್ತೋರ್ವ ಪ್ರಮುಖರಾದ ಬಾಳಾಸಾಹೇಬ್ ಅವರು ಮಾತನಾಡಿ, ಬೆಳಗಾವಿ ನಗರದ ಶಹಾಪೂರ ಬಸವಣಗಲ್ಲಿಯ ಮಹಾಲಕ್ಷ್ಮೀ ದೇವಿಯ ಜನ್ಮೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ದೇವಿಯು ಇಡೀ ಜಗತ್ತಿಗೆ ಸಮೃದ್ಧಿ ಹಾಗೂ ಶಾಂತಿಯನ್ನು ಕರುಣಿಸಲಿ ಎಂದು ತಾಯಿ ಹತ್ತಿರ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇನ್ನು ಶ್ರೀ ಮಹಾಲಕ್ಷ್ಮೀ ದೇವಿಯ ಜನ್ಮೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅರ್ಚಕರ (ಪೂಜಾರಿ) ಕುಟುಂಬಸ್ಥರು ಹಾಗೂ ಊರಿನ ಸಮಸ್ತ ಭಕ್ತಾದಿಗಳು ಶ್ರಮವಹಿಸಿ ಸಹಕರಿಸಿದರು.

Tags:

error: Content is protected !!