gokak

ಡೆತ್‌ನೋಟ್ ಬರೆದಿಟ್ಟು ರವೀಂದ್ರ ಆತ್ಮಹತ್ಯೆ; ಹತ್ತು ದಿನವಾದರೂ ಆಗದ ಆರೋಪಿಗಳ ಬಂಧನ

Share

ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದ್ದ ರವೀಂದ್ರ ದಾನವ್ವಗೋಳ ಆತ್ಮಹತ್ಯೆ ಪ್ರಕರಣ ಈಗ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಡೆತ್‌ನೋಟ್‌ನಲ್ಲಿ ಪ್ರಭಾವಿಗಳ ಹೆಸರಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳು ಇಂದು ಬೃಹತ್ ಪ್ರತಿಭಟನೆ ನಡೆಸಿವೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರವೀಂದ್ರ ದಾನವ್ವಗೋಳ ಅವರ ಆತ್ಮಹತ್ಯೆ ಪ್ರಕರಣ ಜಿಲ್ಲೆಯಲ್ಲಿ ಕಿಚ್ಚು ಹಚ್ಚಿದೆ. ಮೃತ ರವೀಂದ್ರ ತಮ್ಮ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಡಿವೈಎಸ್‌ಪಿ ಮುಲ್ಲಾ ಹಾಗೂ ಪಿಎಸ್‌ಐ ಆನಂದ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಿದ್ದರು. ಆದರೆ, ಘಟನೆ ನಡೆದು ಹತ್ತು ದಿನಗಳು ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಇಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ತಮಟೆ ಬಾರಿಸುವ ಮೂಲಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೃತ ರವೀಂದ್ರ ಅವರ ತಾಯಿ ಬಸವ್ವಾ ಹಾಗೂ ಪತ್ನಿ ಆರತಿ ಅವರು ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದರು. “ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ತಕ್ಷಣ ಬಂಧಿಸಬೇಕು. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಪೊಲೀಸ್ ಇಲಾಖೆಯೇ ಹೊಣೆ” ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.

ಡೆತ್‌ನೋಟ್‌ನಲ್ಲಿ ಹೆಸರಿರುವ ಪ್ರತಿಯೊಬ್ಬರನ್ನು ತನಿಖೆಗೆ ಒಳಪಡಿಸಿ ಜೈಲಿಗಟ್ಟಬೇಕೆಂದು ಅವರು ಪಟ್ಟು ಹಿಡಿದರು.
ದಲಿತ ಸಂಘಟನೆಗಳ ಮುಖಂಡರು ಪೊಲೀಸ್ ಇಲಾಖೆಯ ವಿಳಂಬ ಧೋರಣೆಯನ್ನು ಖಂಡಿಸಿದ್ದು, ಡಿವೈಎಸ್‌ಪಿ ಮುಲ್ಲಾ, ಪಿಎಸ್‌ಐ ಆನಂದ್, ಲಕ್ಷ್ಮಣ ಚಂದರಗಿ ಹಾಗೂ ಶಿವಾನಂದ ಸೇರಿದಂತೆ ಡೆತ್‌ನೋಟ್‌ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಕೂಡಲೇ ದಸ್ತಗಿರಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬಂಧನ ಪ್ರಕ್ರಿಯೆ ನಡೆಯದಿದ್ದರೆ ಇಡೀ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬೈಟ್

ಸದ್ಯ ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

Tags:

error: Content is protected !!