Belagavi

ಪ್ರಧಾನಿ ಮೋದಿ ಮಾದರಿ ಆಡಳಿತಕ್ಕೆ ಗೌರವ: ಬೆಳಗಾವಿಯಲ್ಲಿ ಬಿಜೆಪಿಯಿಂದ ಬೃಹತ್ ಸ್ವಚ್ಛತಾ ಅಭಿಯಾನ; ದೇಶವನ್ನು ವಿಶ್ವಗುರುವನ್ನಾಗಿಸಲು ಮಾಜಿ ಶಾಸಕ ಅನಿಲ ಬೆಣಕೆ ಕರೆ

Share

ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾವಧಿ ಹಾಗೂ ಮಾದರಿ ಆಡಳಿತದ ಹಿನ್ನೆಲೆಯಲ್ಲಿ, ಬೆಳಗಾವಿ ಮಹಾನಗರ ಬಿಜೆಪಿ ವತಿಯಿಂದ ನಗರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ಅನಿಲ ಬೆಣಕೆ ಅವರು, ಜಾತಿ-ಭಾಷೆ ಬೇಧ ಮರೆತು ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಜನತೆಗೆ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಹೆಚ್ಚು ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿ, ದೇಶಕ್ಕೆ ಮಾದರಿ ಆಡಳಿತ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಬಿಜೆಪಿಯಿಂದ ನಗರದ ಪ್ರಮುಖ ವೃತ್ತದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಪ್ರಸಿದ್ಧ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಲ್ಲಿ ಜಮಾಯಿಸಿದ ನಾಯಕರು ಮತ್ತು ಕಾರ್ಯಕರ್ತರು ಸ್ವತಃ ಕಸ ಗುಡಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿದರು. ಈ ವೇಳೆ ಮೋದಿ ಸರ್ಕಾರದ ಜನಪರ ಯೋಜನೆಗಳು ಮತ್ತು ದೇಶದ ಪ್ರಗತಿಗೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆಣಕೆ ಅವರು, ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು. ಜನರು ಜಾತಿ, ಮತ, ಭಾಷೆಯ ಬೇಧಭಾವಗಳನ್ನು ಸಂಪೂರ್ಣವಾಗಿ ಬದಿಗಿಟ್ಟು, ಭಾರತವನ್ನು ಜಗತ್ತಿನ ‘ವಿಶ್ವಗುರು’ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷೆ ಗೀತಾ ಸುತಾರ್, ನಗರ ಸೇವಕ ರಾಜಶೇಖರ್ ಢೋಣಿ, ಪ್ರಮುಖರಾದ ವಿಜಯ ಕೊಡಗಾನೂರ, ಶ್ರೀನಿವಾಸ ಬಿಸನಕೊಪ್ಪ, ಶಿಲ್ಪಾ ಕೇಕರೆ ಹಾಗೂ ಅಡ್ವೋಕೇಟ್ ಧನ್ಯಕುಮಾರ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!