ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ನಿರಾಕರಿಸುತ್ತಿರುವ ಪಾಲಿಕೆಯ ಕನ್ನಡ ವಿರೋಧಿ ನಿಲುವನ್ನು ಖಂಡಿಸಿ ನೃಪತುಂಗ ಯುವಕ ಸಂಘದ ಪದಾಧಿಕಾರಿಗಳು ಇಂದು ಪ್ರಾದೇಶಿಕ ಆಯುಕ್ತರಿಗೆ ಮಹತ್ವದ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿ: ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಕನ್ನಡ ಪರ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂದು ಆಗ್ರಹಿಸಿ ನೃಪತುಂಗ ಯುವಕ ಸಂಘದ ಪದಾಧಿಕಾರಿಗಳು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪಾಲಿಕೆಯಲ್ಲಿ ಕನ್ನಡ ನಾಡು, ನುಡಿ ಮತ್ತು ಗಡಿ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಿಲುವನ್ನು ಗಂಭೀರವಾಗಿ ಪರಿಗಣಿಸಿ, ಈ ಕುರಿತು ತಕ್ಷಣವೇ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಕಳುಹಿಸಿಕೊಡಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಬೆಳಗಾವಿಯ 20ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಕಳೆದ ಮಾರ್ಚ್ 26 ರಿಂದ ಈ ಮಹತ್ವದ ನಿರ್ಣಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿವೆಯಾದರೂ, ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ ಆಡಳಿತಾರೂಢ ಬಿಜೆಪಿ ನಾಯಕರು ಗೊತ್ತುವಳಿ ಸ್ವೀಕರಿಸಲು ಒಪ್ಪದಿರುವುದು ಕನ್ನಡ ನಾಡಿಗೆ ಬಗೆದ ದ್ರೋಹ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಳೆದ 2005 ರ ಅಕ್ಟೋಬರ್ 27 ರಂದು ಅಂದಿನ ಬೆಳಗಾವಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾಗಿ, ಅಂದರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಿವಾದಿತ ಗೊತ್ತುವಳಿಯನ್ನು ಅಂಗೀಕರಿಸಲಾಗಿತ್ತು. ಈ ಹಳೆಯ ಗೊತ್ತುವಳಿಯನ್ನೇ ಮಹಾರಾಷ್ಟ್ರ ಸರ್ಕಾರವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಗಡಿವಿವಾದದ ಪ್ರಕರಣಕ್ಕೆ ತನಗೆ ಪೂರಕ ದಾಖಲೆಯನ್ನಾಗಿ ಬಳಸಿಕೊಳ್ಳುತ್ತಿದೆ. ಈ ಅಪಾಯವನ್ನು ತಪ್ಪಿಸಲು ಈಗ ತಕ್ಷಣವೇ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವುದು ಅನಿವಾರ್ಯವಾಗಿದೆ ಎಂದು ನಿಯೋಗ ವಿವರಿಸಿದೆ. ಈ ಸಂದರ್ಭದಲ್ಲಿ ನೃಪತುಂಗ ಯುವಕ ಸಂಘದ ಅಧ್ಯಕ್ಷ ಸಾಗರ ಬೋರಗಲ್ಲ, ಉಪಾಧ್ಯಕ್ಷ ವೀರೇಂದ್ರ ಗೋಬರಿ, ಕಾರ್ಯದರ್ಶಿ ಆನಂದ ಹುಳಬ್ಬತ್ತೆ ಸೇರಿದಂತೆ ಪದಾಧಿಕಾರಿಗಳಾದ ನಿತಿನ್ ಮುಕರಿ, ರೋಹಿತ್ ಪದ್ಮಣ್ಣವರ, ಸೂರಜ್ ಹುಳಬ್ಬತ್ತೆ, ಆದರ್ಶ್ ಅನಗೋಳ ಹಾಗೂ ರಜತ್ ಅಂಕಲೆ ಉಪಸ್ಥಿತರಿದ್ದರು.
