BELAGAVI

ಮೂರು ಹೆಣ್ಣು ಹೆತ್ತಿದ್ದಕ್ಕೆ ವಿವಾಹಿತೆಗೆ ಕಿರುಕುಳ: ಬೆಳಗಾವಿ ಮಹಿಳಾ ಠಾಣೆಯಲ್ಲಿ ಪತಿ ಸೇರಿ ಐವರ ವಿರುದ್ಧ ಕೇಸ್ ದಾಖಲು!

Share

ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ವಿವಾಹಿತೆಯೊಬ್ಬಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿ ಸೇರಿದಂತೆ ಐವರ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಶಾಸ್ತ್ರಿನಗರದ ನಿವಾಸಿ ಸುಮನ್ ಪ್ರಸಾದ್ ವಾಕುಡೆ (26) ಎಂಬುವವರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದಾರೆ. ಶಿವಮೊಗ್ಗ ಮೂಲದ ಪ್ರಸಾದ್ ವಾಕುಡೆ ಎಂಬುವವರ ಜೊತೆ 2021 ರಲ್ಲಿ ಸುಮನ್ ಅವರ ವಿವಾಹವಾಗಿದ್ದು, ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಆದರೆ, ಜುಲೈ 2022 ರಲ್ಲಿ ಅವಳಿ ಹೆಣ್ಣು ಮಕ್ಕಳು ಹಾಗೂ ಡಿಸೆಂಬರ್ 2024 ರಲ್ಲಿ ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಪತಿಯ ಕ್ರೌರ್ಯ ಮಿತಿಮೀರಿದೆ. “ಮನೆಯಲ್ಲಿ ಎಲ್ಲರಿಗೂ ಗಂಡು ಮಕ್ಕಳಾಗಿದ್ದರೆ, ನಿನಗೆ ಮಾತ್ರ ಹೆಣ್ಣು ಮಕ್ಕಳಾಗುತ್ತಿವೆ” ಎಂದು ಪತಿ ಕುಡಿದು ಬಂದು ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಾವ ನಾರಾಯಣ್, ಅತ್ತೆ ಮತ್ತು ಸಂಬಂಧಿಕರು ಸೇರಿ ಪತಿಗೆ ಎರಡನೇ ಮದುವೆಯಾಗುವಂತೆ ಪ್ರಚೋದನೆ ನೀಡಿ, ಸುಮನ್‌ಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದಾರೆ. ಜುಲೈ 2025 ರಲ್ಲಿ ಪತ್ನಿ ಹಾಗೂ ಮಕ್ಕಳನ್ನು ತವರು ಮನೆಗೆ ತಂದು ಬಿಟ್ಟಿದ್ದ ಪತಿ, ನಂತರ ಅವರ ಜೀವನ ನಿರ್ವಹಣೆಗೆ ಯಾವುದೇ ಹಣ ನೀಡದೆ ಕೈತೊಳೆದಿದ್ದನು. ಈ ಹಿಂದೆ ಮಹಿಳಾ ಠಾಣೆಯಲ್ಲಿ ನೀಡಿದ್ದ ದೂರಿನನ್ವಯ ನಡೆಸಿದ ಸಂಧಾನ ಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಇದೀಗ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಐವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Tags:

error: Content is protected !!