12ನೇ ಶತಮಾನದ ಬಸವಾದಿ ಶರಣರ ವಚನ ಕ್ರಾಂತಿ ಇಂದಿನ ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ. ಬೆಳಗಾವಿಯ ಜಿ.ಎನ್.ಎಂ.ಸಿ. ಆವರಣದಲ್ಲಿ ಕೆ.ಎಲ್.ಇ. ಸಂಸ್ಥೆ ಹಮ್ಮಿಕೊಂಡಿದ್ದ ‘ವಚನೋತ್ಸವ-2026’ ಕಾರ್ಯಕ್ರಮದಲ್ಲಿ ಸಾವಿರಾರು ಕಂಠಗಳಿಂದ ಮೊಳಗಿದ ವಚನ ಗಾಯನ ನೆರೆದಿದ್ದವರಲ್ಲಿ ಭಕ್ತಿ ಭಾವ ಮೂಡಿಸಿತು.


ಬೆಳಗಾವಿಯ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡಿಎಮ್ಡ್ ವಿಶ್ವವಿದ್ಯಾಲಯ) ಆವರಣದಲ್ಲಿ ಕನ್ನಡ ಬಳಗ ಹಾಗೂ ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯದ ಸಹಯೋಗದೊಂದಿಗೆ ‘ವಚನೋತ್ಸವ-2026’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಒಟ್ಟಾಗಿ ಸಮೂಹ ವಚನ ಗಾಯನ ಪ್ರಸ್ತುತಪಡಿಸಿದರು. ಐದು ವರ್ಷದ ಪುಟ್ಟ ಮಕ್ಕಳಿಂದ ಹಿಡಿದು 85 ವರ್ಷದ ಹಿರಿಯರವರೆಗೆ ಎಲ್ಲರೂ ಒಂದೇ ಕಡೆ ಸೇರಿ ವಚನಗಳನ್ನು ಹಾಡಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆ.ಎಲ್.ಇ ಸಂಸ್ಥೆಯ ಕುಲಾಧಿಪತಿಗಳಾದ ಡಾ. ಪ್ರಭಾಕರ್ ಕೋರೆ ಅವರು, 12ನೇ ಶತಮಾನದಲ್ಲೇ ಸಾಮಾಜಿಕ ಸಮಾನತೆ ತಂದ ಬಸವಣ್ಣನವರ ದೂರದೃಷ್ಟಿಯನ್ನು ಕೊಂಡಾಡಿದರು. ಜಗತ್ತಿನ ಮೊದಲ ಸಂಸತ್ತಿನಂತಿದ್ದ ‘ಅನುಭವ ಮಂಟಪ’ದ ಮೂಲಕ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಸ್ಥಾನಮಾನ ನೀಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದು ಅವರು ಪ್ರತಿಪಾದಿಸಿದರು. ಇಂದಿನ ಆಧುನಿಕ ಯುಗದಲ್ಲೂ ಹೆಣ್ಣುಮಕ್ಕಳ ಮೀಸಲಾತಿಗಾಗಿ ಚರ್ಚೆಗಳು ನಡೆಯುತ್ತಿರುವಾಗ, ಅಂದಿನ ಕಾಲದಲ್ಲೇ ಶರಣರು ಲಿಂಗ ಸಮಾನತೆಯನ್ನು ಪ್ರಾಯೋಗಿಕವಾಗಿ ತಂದಿದ್ದರು ಎಂದು ನೆನಪಿಸಿದ ಅವರು, ವಚನಗಳ ಸಂದೇಶ ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಿದರು. “ವಚನಗಳು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಾಮಾನ್ಯ ಜನರಿಗೆ, ಸಾಮಾನ್ಯ ಭಾಷೆಯಲ್ಲಿ ಅರ್ಥವಾಗುವಂತೆ ಮೂಡಿಬಂದವು. ಅಂದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್ಗಿಂತಲೂ ಮಿಗಿಲಾದದ್ದಾಗಿತ್ತು. 12ನೇ ಶತಮಾನದಲ್ಲೇ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನವನ್ನು ಅಲ್ಲಿ ನೀಡಲಾಗಿತ್ತು. ಇವತ್ತು ನಾವು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ 50% ಮಹಿಳೆಯರಿದ್ದರೂ ಇವತ್ತಿಗೂ ನಮಗೆ ಅದನ್ನು ಪೂರ್ಣವಾಗಿ ಕೊಡಲು ಸಾಧ್ಯವಾಗುತ್ತಿಲ್ಲ. ಅಂತಹ ಕಾಲದಲ್ಲೇ ಸಮಾನತೆ ತಂದ ವಚನಗಳ ಸಂದೇಶ ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವಾಗಿದೆ.
