BELAGAVI

ಬೆಳಗಾವಿಯ ಕಣಬರಗಿಯಲ್ಲಿ ಭಾರೀ ಮಳೆಯ ಆರ್ಭಟ: ರಸ್ತೆ-ಚರಂಡಿಗಳಿಲ್ಲದೇ ಮನೆಗಳಿಗೆ ನುಗ್ಗಿದ ನೀರು, ನಿವಾಸಿಗಳ ಆಕ್ರೋಶ!

Share

ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಗೆ ಕಣಬರಗಿಯ ರಾಮತೀರ್ಥ ಗಲ್ಲಿಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮರ್ಪಕ ರಸ್ತೆ ಹಾಗೂ ಗಟಾರು ವ್ಯವಸ್ಥೆ ಇಲ್ಲದ ಕಾರಣ, ಮಳೆ ನೀರು ನೇರವಾಗಿ ಜನರ ಮನೆಗಳಿಗೆ ನುಗ್ಗಿದ್ದು, ಸ್ಥಳೀಯ ಪಾಲಿಕೆ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಬೆಳಗಾವಿಯ ಕಣಬರಗಿ ಇಂಡಲ್ ರಸ್ತೆಯ ರಾಮತೀರ್ಥ ಗಲ್ಲಿಯಲ್ಲಿ ಇಂದು ಸುರಿದ ಭಾರೀ ಮಳೆಯಿಂದಾಗಿ ಇಡೀ ಪ್ರದೇಶ ಜಲಾವೃತಗೊಂಡಿದೆ. ಈ ಭಾಗದಲ್ಲಿ ಯಾವುದೇ ವ್ಯವಸ್ಥಿತ ರಸ್ತೆ ಮತ್ತು ಗಟಾರು ಇಲ್ಲದ ಕಾರಣ, ಮಳೆಯ ನೀರು ಸರಾಗವಾಗಿ ಹರಿದು ಹೋಗಲಾಗದೆ ಸ್ಥಳೀಯ ನಿವಾಸಿಯಾದ ಕಲ್ಲಪ್ಪ ಹಗನಾಯಕ ಅವರ ಮನೆಗೆ ಹಾಗೂ ಸುತ್ತಮುತ್ತಲಿನ ಇತರ ನಾಗರಿಕರ ಮನೆಗಳ ಆವರಣಕ್ಕೆ ನುಗ್ಗಿದೆ. ಇದರಿಂದಾಗಿ ಮನೆಯಲ್ಲಿದ್ದ ಧಾನ್ಯಗಳು ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿದ್ದು, ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರತಿ ಮಳೆಗಾಲದಲ್ಲೂ ಇಂತಹದ್ದೇ ದುಸ್ಥಿತಿ ಎದುರಿಸುತ್ತಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ಇಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!