ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ಮಹತ್ವದ ಜಂಟಿ ಸಭೆ ಜರುಗಿತು. ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ನಡೆದಿರುವ ಮ್ಯಾಪಿಂಗ್ ಕಾರ್ಯದ ಪ್ರಗತಿ ಹಾಗೂ ಪಾರದರ್ಶಕತೆ ಕುರಿತು ಜಿಲ್ಲಾಧಿಕಾರಿಗಳು ಈ ವೇಳೆ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.


ಸುವರ್ಣ ವಿಧಾನ ಸೌಧದ ಕೊಠಡಿ ಸಂಖ್ಯೆ-354 ರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು, ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ 18 ಮತದಾರ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಹಿಂದೆ ನಡೆದಿದ್ದ 2002 ರ ಮತದಾರರ ಪಟ್ಟಿಯನ್ನು ಮೂಲವಾಗಿಟ್ಟುಕೊಂಡು, ಅದಲ್ಲಿದ್ದ ಮತದಾರರು 2025 ರ ಪಟ್ಟಿಯಲ್ಲಿರುವ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 93 ರಷ್ಟು ಮ್ಯಾಪಿಂಗ್ ಪ್ರಗತಿಯನ್ನು ಸಾಧಿಸಲಾಗಿದ್ದು, ಇನ್ನುಳಿದ ಕ್ಷೇತ್ರಗಳಲ್ಲೂ ಶೀಘ್ರದಲ್ಲೇ ಗುರಿ ಮುಟ್ಟಲಾಗುವುದು. ಈ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದಲೇ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಜಂಟಿ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಮ್ಯಾಪಿಂಗ್‌ನಿಂದ ಹೊರಗುಳಿದಿರುವ ನಾಗರಿಕರ ಕುರಿತು ಕಳಕಳಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಅಂತಹವರ ಮನೆ ಮನೆಗೆ ತೆರಳಿ ಬಿ.ಎಲ್.ಓಗಳು ಕಡ್ಡಾಯವಾಗಿ ಅರ್ಜಿ ನೀಡಿ ಭರ್ತಿ ಮಾಡಿಸಿಕೊಳ್ಳಬೇಕು ಎಂದು ಖಡಕ್ ಆದೇಶ ನೀಡಿದರು. ಅರ್ಜಿದಾರರು ಸೂಕ್ತ ದಾಖಲೆಗಳೊಂದಿಗೆ ಭಾರತೀಯ ನಾಗರಿಕರೆಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ದೇಶದ ಯಾವುದೇ ಮೂಲ ನಿವಾಸಿ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಇದು ಜಿಲ್ಲಾಡಳಿತದ ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಈ ಮಹತ್ವದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ್ ಕುಮಾರ್ ಹೊನಕೇರಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮಹಾನಗರ ಪಾಲಿಕೆ ಕಂದಾಯ ಉಪಾಯುಕ್ತ ಸಿದ್ಧು ಹುಲ್ಲೋಳ್ಳಿ ಉಪಸ್ಥಿತರಿದ್ದರು.
