BELAGAVI

ಬೆಳಗಾವಿ ಆದಿತ್ಯರಾಜ್ ಕ್ಯಾಪಿಟಲ್ ವಂಚನೆ ಪ್ರಕರಣ: ಇಂದು ಸಿಐಡಿಗೆ ತನಿಖೆ ಹಸ್ತಾಂತರ ಸಾಧ್ಯತೆ, ಗುಜರಾತ್‌ಗೆ ಪರಾರಿಯಾದ ಆರೋಪಿ ಬಾಲರಾಜ್ ಮಾನೆ!

Share

ಬೆಳಗಾವಿಯಲ್ಲಿ ಸಂಚಲನ ಮೂಡಿಸಿರುವ ಆದಿತ್ಯರಾಜ್ ಕ್ಯಾಪಿಟಲ್ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಇಂದು ಅಧಿಕೃತವಾಗಿ ಸಿಐಡಿಗೆ ಹಸ್ತಾಂತರವಾಗುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗಾಗಿ ಬೆಂಗಳೂರಿನಿಂದ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡ ಈಗಾಗಲೇ ಬೆಳಗಾವಿಗೆ ಆಗಮಿಸಿದೆ.

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದ ಬೆನ್ನಲ್ಲೇ, ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಬಹುಕೋಟಿ ವಂಚನೆ ಆರೋಪದ ತನಿಖೆಯನ್ನು ಸಹ ಸರ್ಕಾರ ಸಿಐಡಿಗೆ ಒಪ್ಪಿಸಲು ಮುಂದಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಸಮಗ್ರ ವರದಿಯ ಆಧಾರದ ಮೇಲೆ, ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ್ ಅವರ ಮಾರ್ಗದರ್ಶನದಲ್ಲಿ ಈ ಹೈಪ್ರೊಫೈಲ್ ತನಿಖೆ ಆರಂಭಗೊಳ್ಳಲಿದೆ. ಇತ್ತ ವಂಚನೆ ನಡೆಸಿ ಕಳೆದ ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿರುವ ಸಂಸ್ಥೆಯ ಮಾಲೀಕ ಬಾಲರಾಜ್ ಮಾನೆ, ಮಹಾರಾಷ್ಟ್ರದ ಮಾರ್ಗವಾಗಿ ಸದ್ಯ ಗುಜರಾತ್‌ಗೆ ಪರಾರಿಯಾಗಿರುವ ಖಚಿತ ಮಾಹಿತಿ ಲಭ್ಯವಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಾಲರಾಜ್ ಮಾನೆ ಪತ್ತೆಗಾಗಿ ಬೆಳಗಾವಿ ಪೊಲೀಸರು ತೀವ್ರ ಜಾಲ ಬೀಸಿದ್ದು, ಇತ್ತ ಸಿಐಡಿ ತಂಡ ಕೂಡ ಬೆಳಗಾವಿ ಪೊಲೀಸರಿಂದ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪಡೆದುಕೊಂಡು ವಂಚನೆಯ ಆಳ-ಅಗಲವನ್ನು ಕೆದಕಲು ಸಜ್ಜಾಗಿದೆ.

ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ ಸಾವಿರಾರು ಕೋಟಿ ರೂ. ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಐಡಿ ಡಿವೈಎಸ್ಪಿ ರವಿ ಎಚ್. ಅವರು ಟಿಳಕವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.
ಶಿವಂ ಅಸೋಸಿಯೇಟ್ಸ್ ಮಾದರಿಯಲ್ಲಿಯೇ ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ ಸಂಸ್ಥೆ ಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಖಡೇಬಜಾರ್ ಎಸಿಪಿ ಶೇಕರಪ್ಪ ಅವರು ಸಿಐಡಿ ಡಿವೈಎಸ್ಪಿ ರವಿ ಎಚ್. ಅವರಿಗೆ ಇದುವರೆಗೆ ನಡೆದ ಪೊಲೀಸ್ ತನಿಖೆಯ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ಸಂಸ್ಥೆಯ ಹಣಕಾಸು ವ್ಯವಹಾರಗಳು, ಠೇವಣಿದಾರರ ಸಂಖ್ಯೆ ಹಾಗೂ ಹೂಡಿಕೆ ಮೊತ್ತದ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದ್ದು, ಸಿಐಡಿ ತಂಡ ಶೀಘ್ರದಲ್ಲೇ ಪ್ರಮುಖ ದಾಖಲೆಗಳು ಹಾಗೂ ಸಂಬಂಧಪಟ್ಟವರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Tags:

error: Content is protected !!