BELAGAVI

ಬೆಳಗಾವಿಯಲ್ಲಿ ಹೆಸ್ಕಾಂ-ಸ್ಮಾರ್ಟ್ ಸಿಟಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬಲಿ ಆಗ್ಬೇಕಾ? ರಸ್ತೆ ರಸ್ತೆಯಲ್ಲೂ ತೆರೆದುಕೊಂಡಿವೆ ಸಾವಿನ ವಿದ್ಯುತ್ ಕಂಬಗಳು!

Share

ಬೆಳಗಾವಿ ನಗರದಲ್ಲಿ ಮುಂಗಾರು ಮಳೆ ಚುರುಕಾಗುತ್ತಿದ್ದಂತೆ ಸಾರ್ವಜನಿಕರ ಜೀವಕ್ಕೆ ಹೆಸ್ಕಾಂ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಂಟಕ ತಂದೊಡ್ಡಿದ್ದಾರೆ. ನಗರದ ಪ್ರಮುಖ ಸರ್ಕಲ್ ಹಾಗೂ ರಸ್ತೆಗಳ ಬದಿಯ ಬೀದಿ ದೀಪಗಳ ವಿದ್ಯುತ್ ಕೇಸಿಂಗ್‌ಗಳ ಮುಚ್ಚಳಗಳು ಮುರಿದು ಬಿದ್ದಿದ್ದು, ತಂತಿಗಳು ಬಿಕೋ ಎನ್ನುತ್ತಿವೆ. ಯಾವುದೇ ಕ್ಷಣದಲ್ಲೂ ದೊಡ್ಡ ದುರಂತ ಸಂಭವಿಸುವ ಭೀತಿ ಎದುರಾಗಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಹೌದು… ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಈಗ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಗೋಗಟೆ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಪೋಸ್ಟ್‌ಮ್ಯಾನ್ ಸರ್ಕಲ್, ಫೋರ್ಟ್ ಡಬಲ್ ರಸ್ತೆ ಸೇರಿದಂತೆ ಪ್ರಮುಖ ಜಾಗಗಳಲ್ಲಿನ ಬೀದಿ ದೀಪಗಳ ವಿದ್ಯುತ್ ಕೇಸಿಂಗ್‌ಗಳ ಮುಚ್ಚಳಗಳು ಮಾಯವಾಗಿವೆ. ಸ್ವಿಚ್‌ಗಳು ಹಾಗೂ ಲೈವ್ ಇಲೆಕ್ಟ್ರಿಕ್ ವೈರ್‌ಗಳು ಸಾರ್ವಜನಿಕರಿಗೆ ಬಹಿರಂಗವಾಗಿ ಕಾಣಿಸುತ್ತಿವೆ. ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಈ ತೆರೆದಿರುವ ತಂತಿಗಳಿಗೆ ಮಳೆನೀರು ಬಿದ್ದರೆ ಇಡೀ ಕಂಬವೇ ಹೈ-ವೋಲ್ಟೇಜ್ ಕರೆಂಟ್ ಶಾಕ್ ಕೊಡುವ ಸಾವಿನ ಕಂಬವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಶಾಲಾ ಮಕ್ಕಳು, ಹಿರಿಯ ನಾಗರಿಕರು, ಪಾದಚಾರಿಗಳು ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಓಡಾಡುತ್ತಾರೆ. ಒಂದು ವೇಳೆ ಈ ಕೇಸಿಂಗ್ ಒಳಗೆ ನೀರು ನುಗ್ಗಿ ಶಾರ್ಟ್ ಸರ್ಕ್ಯೂಟ್ ಆದರೆ ಇಡೀ ಏರಿಯಾದ ಬೀದಿ ದೀಪಗಳು ಕೈಕೊಡಲಿವೆ. ಇದರಿಂದಾಗಿ ರಾತ್ರಿ ವೇಳೆ ರಸ್ತೆಗಳು ಕತ್ತಲೆಯಾಗಲಿದ್ದು, ಭೀಕರ ಅಪಘಾತಗಳ ಸಾಧ್ಯತೆಯೂ ಹೆಚ್ಚಾಗಲಿದೆ. ಜೊತೆಗೆ ದುಬಾರಿ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿ ಸಾರ್ವಜನಿಕರ ಹಣ ಪೋಲಾಗುತ್ತದೆ. ಹೀಗಾಗಿ ತಕ್ಷಣವೇ ಹೆಸ್ಕಾಂ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶಾಶ್ವತ ದುರಸ್ತಿ ಮಾಡುವವರೆಗೂ ಕನಿಷ್ಠ ತಾತ್ಕಾಲಿಕ ರಕ್ಷಣಾತ್ಮಕ ಕವಚಗಳು ಮತ್ತು ಎಚ್ಚರಿಕೆ ಫಲಕಗಳನ್ನಾದರೂ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ‘ಬೆಳಗಾವಿ ನಮ್ಮ ಮನೆ, ಇಲ್ಲಿನ ಪ್ರತಿಯೊಬ್ಬ ನಾಗರಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ’ ಎಂಬ ಕಳಕಳಿಯೊಂದಿಗೆ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ದಂಡಿಗೆ ಮನವಿ ಮಾಡಿದ್ದಾರೆ. ಇಂದು ತೆಗೆದುಕೊಳ್ಳುವ ಕೆಲವೇ ನಿಮಿಷಗಳ ಮುನ್ನೆಚ್ಚರಿಕೆ ಕ್ರಮ, ನಾಳೆ ಅಮೂಲ್ಯ ಜೀವಗಳನ್ನು ಉಳಿಸಬಲ್ಲದು. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಳ್ಳುತ್ತವಾ ಅಥವಾ ದೊಡ್ಡ ದುರಂತ ನಡೆಯುವವರೆಗೂ ಕಾಯುತ್ತವಾ ಕಾದು ನೋಡಬೇಕಿದೆ.

Tags:

error: Content is protected !!