Belagavi

ಬೆಳಗಾವಿ ಗಡಿ ವಿವಾದ: ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರ ಪರ ಠರಾವು ಪಾಸ್ ಮಾಡಲು ಆಗ್ರಹ – ನಾಗನೂರು ಶ್ರೀಗಳ ಭೇಟಿಯಾದ ಕನ್ನಡಪರ ಸಂಘಟನೆಗಳು

Share

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆಯಲ್ಲಿ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇಂದು ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳನ್ನು ಭೇಟಿಯಾಗಿ ಮಹತ್ವದ ಬೆಂಬಲ ಕೋರಿವೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಗಡಿ ವಿವಾದದಲ್ಲಿ ಮಹಾಜನ್ ವರದಿ ಅಂತಿಮ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆಯಲ್ಲಿ ಕೈಗೊಳ್ಳಲೇ ಬೇಕು ಎಂದು ಒತ್ತಡ ಹೇರಲು ಬೆಂಬಲಿಸುವಂತೆ ಆಗ್ರಹಿಸಿ ಇಂದು ಕನ್ನಡಪರ ಸಂಘಟನೆಗಳು ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮಿಜೀಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತು.

ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ, ಶ್ರೀನಿವಾಸ ತಾಳೂಕರ, ಇನ್ನುಳಿದವರು ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿವಿವಾದದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯವನ್ನು ಕೈಗೊಳ್ಳಲು ಮೀನಮೇಷ ಎನಿಸುತ್ತಿರುವ ಸಂಗತಿ ಮತ್ತು ಕನ್ನಡ ಪರ ಸಂಘಟನೆಗಳ ಹೋರಾಟಗಳನ್ನು ಮನವರಿಕೆ ಮಾಡಿದರು. ಅಲ್ಲದೇ ಮಹಾಪಾಲಿಕೆಯಲ್ಲಿ ಕನ್ನಡಿಗರ ಪರ ನಿರ್ಣಯ ಕೈಗೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸುವಂತೆ ಆಗ್ರಹಿಸಿದರು.

ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಜೀಗಳು ಮಾತನಾಡಿ, ಕಾಯಕಯೋಗಿ, ಮಹಾಪ್ರಸಾದಿ, ಶತಾಯುಷಿ ಡಾ.ಶ್ರೀ ಶಿವಬಸವ ಸ್ವಾಮಿಜೀಗಳು ಕರ್ನಾಟಕದಲ್ಲಿ ಬೆಳಗಾವಿ ಉಳಿಯಲು ವಿಶೇಷ ಹೋರಾಟವನ್ನು ನಡೆಸಿದ್ದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಸೂರ್ಯ ಚಂದ್ರರಿರುವ ವರೆಗೂ ಸತ್ಯ. ಇದರಲ್ಲಿ ಯಾವುದೇ ರೀತಿಯ ಸ್ವಾರ್ಥವಿಲ್ಲ. ಮಹಾನಗರ ಪಾಲಿಕೆಯ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸು ಮಾಡುವುದು ನಮ್ಮ ಬೇಡಿಕೆಯಾಗಿದೆ. ಇದು ಮುಂದೆ ನಡೆಯಲಿರುವ ಅನಾಹುತಗಳನ್ನು ತಡೆಯಲು ಪೂರಕವಾಗಿದೆ. 2004-05 ರಲ್ಲಿ ನಡೆದ ಠರಾವಿಗೆ ಪ್ರತಿಯಾಗಿ ಈ ಪಾಲಿಕೆಯಲ್ಲಿರುವ ಕನ್ನಡಿಗರು ಠರಾವು ಪಾಸ್ ಮಾಡಬೇಕು. ಬೆಳಗಾವಿಯ ಭವಿಷ್ಯವನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳ ನಿರ್ಧಾರಕ್ಕೆ ಶ್ರೀಮಠವು ಬೆಂಬಲಿಸುತ್ತದೆ. ನಾಗನೂರು ಶ್ರೀಗಳು ಬೆಳಗಾವಿಗೆ ಬರುತ್ತಿರಲಿಲ್ಲವೆಂದರೇ ಬೆಳಗಾವಿ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಮಾರುತಿ ಗಲ್ಲಿ, ರಾಮದೇವ ಗಲ್ಲಿಯಲ್ಲಿ ಶ್ರೀಗಳು ಮತ್ತು ಮಠದ ವಿದ್ಯಾರ್ಥಿಗಳು ಮರಾಠಿಗರ ಗೂಂಡಾವರ್ತನೆಯನ್ನು ಸಹಿಸಿದ್ದವನ್ನು ಮರೆಯಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಲು ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ. ಮಹಾನಗರ ಪಾಲಿಕೆಗೆ ಮನವರಿಕೆ ಮಾಡಲೂ ಮತ್ತೊಮ್ಮೆ ಪ್ರಯತ್ನ ಮಾಡೋಣ. ಚುನಾವಣೆ ದೂರವಿದೆ. ಸುಪ್ರೀಂಕೋರ್ಟ್ ನೆಪ ಹೇಳಿ ಠರಾವು ಪಾಸ್ ಮಾಡದೇ ಕಾಲ ಕಳೆಯುವುದು ಸರಿಯಲ್ಲ. ಕನ್ನಡಿಗರ ವಿಶ್ವಾಸವನ್ನು ಉಳಿಸಿಕೊಳ್ಳುವ ಕಾರ್ಯವನ್ನು ಪಾಲಿಕೆ ಮಾಡಬೇಕು. ಇಲ್ಲದಿದ್ದರೇ, ಮುಂದಿನ ದಿನಗಳಲ್ಲಿ ಅವರ ಅಸ್ತಿತ್ವ ಉಳಿಯುವುದಿಲ್ಲ. ಕನ್ನಡಿಗರೇ ಪಾಲಿಕೆಯನ್ನು ವಿಸರ್ಜಿಸುವ ಪ್ರಸಂಗವನ್ನು ತಂದುಕೊಳ್ಳಬಾರದು ಎಂದರು.

Tags:

error: Content is protected !!