BELAGAVI

ಯೆಳ್ಳೂರು ಗ್ರಾಮಸ್ಥರ ಆಕ್ರೋಶ: ಮೂಲಭೂತ ಸೌಕರ್ಯಕ್ಕಾಗಿ ಸಿಇಒ ರಾಹುಲ್ ಶಿಂಧೆಗೆ ಮನವಿ, ತೆರಿಗೆ ಬಹಿಷ್ಕಾರದ ಎಚ್ಚರಿಕೆ!

Share

ಯೆಳ್ಳೂರು ಗ್ರಾಮದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂದೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಕಾಲಕ್ಕೆ ಸೌಲಭ್ಯ ಸಿಗದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ವರ್ಷದಿಂದ ಇ-ಸ್ವತ್ತು (ಗಣಕೀಕೃತ ಉತಾರೆ) ಸಿಗದೆ ಸಾರ್ವಜನಿಕರ ಸಾಲ ಸೌಲಭ್ಯ ಹಾಗೂ ಆಸ್ತಿ ವರ್ಗಾವಣೆ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಯೆಳ್ಳೂರು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ಅವರಿಗೆ ಮನವಿ ಸಲ್ಲಿಸಿರುವ ಸಾರ್ವಜನಿಕರು, ಗ್ರಾಮದ ಸರ್ಕಾರಿ ಸ್ಮಶಾನ ಭೂಮಿಯಲ್ಲಿ ವಿದ್ಯುತ್, ನೀರು ಹಾಗೂ ಸ್ವಚ್ಛತೆಯಂತಹ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಜನರು ಪರದಾಡುವಂತಾಗಿದೆ ಎಂದು ದೂರಿದ್ದಾರೆ. ಜಲಜೀವನ್ ಮಿಷನ್ ಸಂಪರ್ಕ ಕಲ್ಪಿಸದ ಕಾರಣ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಮಳೆಗಾಲ ಹತ್ತಿರವಿದ್ದರೂ ಚರಂಡಿಗಳನ್ನು ಸ್ವಚ್ಛಗೊಳಿಸದೆ ಕೇವಲ ಕಾಟಾಚಾರದ ಕೆಲಸ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಕಾಲಕ್ಕೆ ತೆರಿಗೆ ಪಾವತಿಸದಿದ್ದರೆ ದಂಡ ವಿಧಿಸುವ ಆಡಳಿತ, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪಾಟೀಲ್ ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಇ-ಸ್ವತ್ತು ವಿತರಣೆ, ನೀರು ಸರಬರಾಜು, ಸ್ಮಶಾನದ ರಸ್ತೆ ದುರಸ್ತಿ ಹಾಗೂ ಚರಂಡಿ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದರ ಜೊತೆಗೆ ಮನೆ ತೆರಿಗೆ ಮತ್ತು ನೀರು ತೆರಿಗೆ ಬಹಿಷ್ಕರಿಸುವುದಾಗಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವಾಜಿ ನಂದೂರ್ಕರ್, ಪರಶುರಾಮ್ ಪರಿಟ್, ನಿಖಿಲ್ ಪಾಟೀಲ್ ಸೇರಿದಂತೆ ಪ್ರಮುಖ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!