“ನನ್ನ ತಂದೆ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ, ಕಾಗವಾಡ ಶಾಸಕ ರಾಜು ಕಾಗೆ ಮತ್ತು ನಾನು ಸೇರಿ ಕಾಗವಾಡ ಮತಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇವೆ” ಎಂದು ಚಿಕ್ಕೋಡಿ ಸಂಸದರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಉಗಾರಿನಲ್ಲಿ ಹೇಳಿದರು.

ಶನಿವಾರದಂದು, 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ 2 ಕೋಟಿ ರೂಪಾಯಿ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಪೂಜೆ ಸಲ್ಲಿಸಿ, ಚಾಲನೆ ನೀಡಿ ಮಾತನಾಡಿದರು.

ಉಗಾರ್ ಖುರ್ದ್ ಬಸ್ ನಿಲ್ದಾಣದ ಆವರಣ ಹಾಗೂ ಪಂಪಿಂಗ್ ರಸ್ತೆ, ಅಂದರೆ ಮುಖ್ಯ ರಸ್ತೆಯಿಂದ ರವಿ ರಾಜಮಾನೆ ಅವರ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಿಸುವ ಕಾಮಗಾರಿ ಬಗ್ಗೆ ಗುತ್ತಿಗೆದಾರ ಸಂದೀಪ್ ಖರಾಡೆ ಅವರು ಮಾಹಿತಿ ನೀಡಿ ಸಂಸದರನ್ನು ಸನ್ಮಾನಿಸಿದರು.
ಈ ವೇಳೆ ದಲಿತ ಮುಖಂಡರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಗಾರ್ಡನ್ ನಿರ್ಮಿಸುವಂತೆ ಮನವಿ ನೀಡಿದರು. ಮರಾಠ ಸಮಾಜದ ವತಿಯಿಂದ ಭವನ ನಿರ್ಮಿಸಲು 20 ಲಕ್ಷ ರೂಪಾಯಿ ಅನುದಾನ ನೀಡುವಂತೆ ಸಮಾಜದ ಮುಖಂಡರಾದ ವಿಶ್ವನಾಥ್ ಶಿರಸಾಟ್, ವಿಕ್ರಂ ಭೋಸ್ಲೆ, ಪುರಸಭೆ ಉಪಾಧ್ಯಕ್ಷ ಸತೀಶ್ ಜಗತಾಪ್ ಮತ್ತಿತರರು ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಉಗಾರ್ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲ್ಲಿಸುವಂತೆ ಪ್ರಯಾಣಿಕರು ಮನವಿ ಅರ್ಪಿಸಿದರು.
ಪ್ರಾರಂಭದಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ಹಮ್ಮಿಕೊಂಡು ಬಸ್ ನಿಲ್ದಾಣದ ಆವರಣದಲ್ಲಿರುವ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಅವರ ಪ್ರತಿಮೆಗೆ ಸಂಸದರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಸಂಸದರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ, ಆರೋಗ್ಯ ವಿಚಾರಿಸಿದರು. ಇದೇ ವೇಳೆ ಕಾಗವಾಡ ತಾಲೂಕು ಪಂಚಾಯಿತಿ ಕಚೇರಿಗೆ ಮಂಜೂರಾದ ನೂತನ ಬೊಲೆರೊ ವಾಹನವನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ ಅವರಿಗೆ ಹಸ್ತಾಂತರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಉಗಾರ್ ಪುರಸಭೆ ಅಧ್ಯಕ್ಷೆ ಶ್ರೀಮತಿ ಫಾತಿಮಾ ನದಾಫ್, ಉಪಾಧ್ಯಕ್ಷ ಸತೀಶ್ ಜಗತಾಪ್, ಸದಸ್ಯೆ ಆರತಿ ಜಗತಾಪ್ ಹಾಗೂ ಇತರ ಸದಸ್ಯರು ಪೂಜೆ ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ್ ಸಿಂದಗಿ, ಪಿಕೆಪಿಎಸ್ ಅಧ್ಯಕ್ಷ ದಾದೂಬಾ ಥೂರುಶೆ, ಸದಸ್ಯ ದಿಲೀಪ್ ಹುಲ್ಲೋಳಿ, ವೀರಭದ್ರ ಕಟಗೇರಿ, ವಿಕ್ರಂ ಬೋಸ್ಲೆ, ಅಜಿತ್ ಬೋಸ್ಲೆ, ಹರುಣ ಮುಲ್ಲಾ, ಈಶ್ವರ್ ಕಾಂಬಳೆ, ವಿಜಯ ಆಸುದೇ, ನಿವೃತ್ತ ಸೈನಿಕ ಖರಾಡೆ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎಂ. ಎಸ್. ಮಗದುಮ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
