ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಮಣ್ಣು ಮಾಫಿಯಾ ಎಗ್ಗಿಲ್ಲದೆ ಸಾಗಿದ್ದು, ಭೂ ಸ್ವಾಧೀನವಾಗಿರುವ ಕೃಷ್ಣಾ ನದಿ ತೀರದ ಜಮೀನುಗಳನ್ನು ಕದೀಮರು ಬೆಳ್ಳಂಬೆಳಿಗ್ಗೆ ಬಗೆಯುತ್ತಿದ್ದಾರೆ. ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದರೆ, ಇತ್ತ ಧೀರ ರೈತ ಮಹಿಳೆಯೊಬ್ಬರು ಅಕ್ರಮ ಟ್ರ್ಯಾಕ್ಟರ್‌ಗಳನ್ನು ತಡೆದು ತರಗತಿ ತಗೆದುಕೊಂಡಿರುವ ಘಟನೆ ಹಿರೇಪಡಸಲಗಿ ಗ್ರಾಮದಲ್ಲಿ ನಡೆದಿದೆ.


ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಮುಳುಗಡೆ ಕ್ಷೇತ್ರದಲ್ಲಿ ಅಕ್ರಮ ಮಣ್ಣು ಮಾಫಿಯಾ ತೀವ್ರಗೊಂಡಿದೆ. ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ದಂದೆಕೋರರು ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಬಳಸಿ ನಿರಂತರವಾಗಿ ಮಣ್ಣು ಅಗೆದು ಸಾಗಿಸುತ್ತಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಸರ್ಕಾರಿ ಭೂ ಸ್ವಾಧೀನಿತ ಜಮೀನಿನಲ್ಲಿ ಈ ದಂಧೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ಆದರೆ, ಇಂದು ಬೆಳಿಗ್ಗೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ಮಧ್ಯ ಹಾದಿಯಲ್ಲೇ ತಡೆದ ಸ್ಥಳೀಯ ರೈತ ಮಹಿಳೆಯೊಬ್ಬರು ಮಾಲೀಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತು ಈ ಅಕ್ರಮ ದಂದೆಗೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


