Bagalkot

ಮುಳುಗಡೆ ಜಿಲ್ಲೆಗೆ ಒಲಿಯದ ಮಂತ್ರಿ ಭಾಗ್ಯ! ಸಿಎಂ ಡಿಕೆಶಿ ಮೊದಲ ಸಂಪುಟ ಪಟ್ಟಿಯಲ್ಲಿ ಬಾಗಲಕೋಟೆ ಕಡೆಗಣನೆ; ಶಾಸಕರಲ್ಲಿ ಶುರುವಾಯ್ತು ಢವಢವ!

Share

ರಾಜ್ಯ ರಾಜಕಾರಣದ ಇವತ್ತಿನ ಅತ್ಯಂತ ದೊಡ್ಡ ಬ್ರೇಕಿಂಗ್ ಸುದ್ದಿ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಮುಳುಗಡೆ ಜಿಲ್ಲೆ ಬಾಗಲಕೋಟೆಗೆ ತೀವ್ರ ನಿರಾಶೆಯಾಗಿದೆ. ಸಚಿವ ಸ್ಥಾನದ ರೇಸ್‌ನಲ್ಲಿದ್ದ ಜಿಲ್ಲೆಯ ಪ್ರಮುಖ ಶಾಸಕರಿಗೆ ಮೊದಲ ಲಿಸ್ಟ್’ನಲ್ಲಿ ಸ್ಥಾನ ಸಿಗದೇ ಇರುವುದು ಸದ್ಯ ಜಿಲ್ಲಾ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಗೆ ಯಾವುದೇ ಸ್ಥಾನ ಸಿಗದೇ ಇರುವುದು ಇಡೀ ಜಿಲ್ಲೆಯ ಜನತೆಗೆ ಹಾಗೂ ರಾಜಕೀಯ ಮುಖಂಡರಿಗೆ ತೀವ್ರ ನಿರಾಶೆ ಮೂಡಿಸಿದೆ. ಮೊದಲ ಲಿಸ್ಟ್‌ನಲ್ಲೇ ಸಚಿವ ಸ್ಥಾನದ ಬಲವಾದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕ ಆರ್.ಬಿ. ತಿಮ್ಮಾಪೂರ ಅವರಿಗೆ ಹೈಕಮಾಂಡ್ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ತಿಮ್ಮಾಪೂರ ಅವರ ಬೆಂಬಲಿಗರಲ್ಲಿ ಆತಂಕ ಶುರುವಾಗಿದ್ದು, ದಲಿತ ಎಡಗೈ ಕೋಟಾದ ಅಡಿಯಲ್ಲಿ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರಲು ಮುಂದಾಗಿದ್ದಾರೆ.

ಇನ್ನೊಂದೆಡೆ, ಜಿಲ್ಲೆಯ ಮತ್ತಿಬ್ಬರು ಪ್ರಭಾವಿ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಹಾಗೂ ಜೆ.ಟಿ. ಪಾಟೀಲ್ ಅವರ ಸಚಿವ ಸ್ಥಾನದ ಕನಸಿಗೂ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಪಂಚಮಸಾಲಿ ಕೋಟಾದಡಿಯಲ್ಲಿ ಕಾಶಪ್ಪನವರ್ ಲಾಬಿ ನಡೆಸುತ್ತಿದ್ದರೆ, ಸಮುದಾಯದ ಆಧಾರದ ಮೇಲೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಜೆ.ಟಿ. ಪಾಟೀಲ್ ಕಸರತ್ತು ನಡೆಸುತ್ತಿದ್ದಾರೆ. ಬಾಗಲಕೋಟೆಯ ಯುಕೆಪಿ ಯೋಜನೆಯ ಮುಳುಗಡೆ ಸಂತ್ರಸ್ತರ ಕಣ್ಣೀರು ಒರೆಸಲು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ವಹಿಸಲು ಈ ಬಾರಿ ಸಚಿವ ಸ್ಥಾನ ಸಿಗಲೇಬೇಕಿತ್ತು ಎಂಬುದು ಸಾರ್ವಜನಿಕರ ವಾದವಾಗಿದೆ. ನೂತನ ಸಿಎಂ ಸಂಪುಟದಲ್ಲೂ ಮಂತ್ರಿಗಿರಿ ಸಿಗದೆ ಬಾಗಲಕೋಟೆ ಜಿಲ್ಲೆ ಮತ್ತೊಮ್ಮೆ ರಾಜಕೀಯವಾಗಿ ಸಂತ್ರಸ್ತವಾಗಿಯೇ ಉಳಿದಂತಾಗಿದ್ದು, ಕನಿಷ್ಠ ಎರಡನೇ ಪಟ್ಟಿಯಲ್ಲಾದರೂ ಸಿಎಂ ಡಿಕೆಶಿ ಜಿಲ್ಲೆಗೆ ಮಂತ್ರಿ ಭಾಗ್ಯ ಕರುಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!