ಸಾರ್ವಜನಿಕರೇ ಎಚ್ಚರ! ಕಡಿಮೆ ಅವಧಿಯಲ್ಲಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸುವ ವಂಚಕರ ಜಾಲದ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ಆಮಿಷಗಳಿಗೆ ಸಾರ್ವಜನಿಕರು ಬಲಿಯಾಗದಂತೆ ಮತ್ತು ಅನಧಿಕೃತ ಖಾಸಗಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡದಂತೆ ಮನವಿ ಮಾಡಿದ್ದಾರೆ.


ಸಾರ್ವಜನಿಕರು ತಮ್ಮ ಕಷ್ಟದ ಹಣವನ್ನು ಬ್ಯಾಂಕುಗಳಲ್ಲಿ ಮಾತ್ರ ಠೇವಣಿ ಇಡಬೇಕು ಮತ್ತು ಯಾವುದೇ ಅನಧಿಕೃತ ಖಾಸಗಿ ಕಂಪನಿಗಳಿಗೆ ಹಣ ನೀಡಬಾರದು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಸರ್ಕಾರಿ ನೋಂದಣಿಕೃತ ಚಿಟ್ ಫಂಡ್ ಸಂಸ್ಥೆಗಳಿಗೆ ಮಾತ್ರ ಹಣ ಠೇವಣಿ ಇಟ್ಟುಕೊಳ್ಳುವ ಕಾನೂನುಬದ್ಧ ಅನುಮತಿ ಇರುತ್ತದೆ ಎಂದರು. ಯಾರಾದರೂ ಶೇ.20 ರಿಂದ 30 ರಷ್ಟು ಅತಿಯಾದ ಲಾಭಾಂಶ ಅಥವಾ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆಮಿಷ ಒಡ್ಡಿದರೆ ಅದನ್ನು ಯಾರೂ ನಂಬಬಾರದು, ಇಂತಹ ಪ್ರಕರಣಗಳಲ್ಲಿ ನೂರಕ್ಕೆ ನೂರರಷ್ಟು ಮೋಸ ಅಡಗಿರುತ್ತದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು. ಸಾರ್ವಜನಿಕರು ಇಂತಹ ಜಾಲಗಳಿಗೆ ಬಲಿಪಶು ಆಗದೆ, ಯಾವುದೇ ಶಂಕಾಸ್ಪದ ವ್ಯವಹಾರಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು, ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಖಂಡಿತ ಎಂದು ಅವರು ಎಚ್ಚರಿಸಿದರು.


