Belagavi

ಬೆಳಗಾವಿಯಲ್ಲಿ ಸಿಸಿಬಿ ಪೊಲೀಸರಿಂದ ಹೈವೇ ಗಾಂಜಾ ದಂಧೆಕೋರರ ಹೆಡೆಮುರಿ: ಐವರ ಬಂಧನ, ಕಾರು-ಬೈಕ್ ಸೇರಿ ರೂ. 9.21 ಲಕ್ಷ ಮೌಲ್ಯದ ಸ್ವತ್ತು ಜಪ್ತಿ!

Share

• ಸಿಸಿಬಿ ಪೊಲೀಸರಿಂದ ಭರ್ಜರಿ ಗಾಂಜಾ ಬೇಟೆ
• ಐದು ಜನ ಅಂತರರಾಜ್ಯ ಆರೋಪಿಗಳ ಬಂಧನ
• ಒಂಬತ್ತು ಲಕ್ಷಕ್ಕೂ ಅಧಿಕ ಮಾಲು ಜಪ್ತಿ
• ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಖೆಡ್ಡಾ ತೋಡಿದ್ದಾರೆ. ಹಲಗಾ-ಮಚ್ಚೆ ಬೈಪಾಸ್ ರಸ್ತೆಯ ಜಂಕ್ಷನ್‌ನಲ್ಲಿ ಕಾರು ಹಾಗೂ ಬೈಕ್‌ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಐದು ಜನ ಅಂತರ್-ಜಿಲ್ಲಾ ಹಾಗೂ ಅಂತರರಾಜ್ಯ ದಂಧೆಕೋರರನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ಬೆಳಗಾವಿಯ ಸಿಸಿಬಿ ಪಿಐ ಮಂಜುನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿಯ ತಂಡವು ಈ ಮಿಂಚಿನ ದಾಳಿ ನಡೆಸಿದೆ. ಬಂಧಿತ ಆರೋಪಿಗಳನ್ನು ನಾವಗೇಯ ಕೃಷ್ಣಾ ಅಲಿಯಾಸ್ ರಾಜು ರಾಮನ್ನವರ (27), ರಣಕುಂದದ ಪ್ರಮೋದ ಪಾಟೀಲ (34), ಮಹಾರಾಷ್ಟ್ರ ಕೊಲ್ಲಾಪುರದ ರಾಮಕೃಷ್ಣ ಮಾವುರಕರ (32), ಮಚ್ಚೆಯ ಪರಶುರಾಮ ಬುಗಡಿಕಟ್ಟ (25) ಮತ್ತು ಖಾನಾಪುರದ ಜಾನು ಗಾವಡ (45) ಎಂದು ಗುರುತಿಸಲಾಗಿದೆ. ಈ ಖದೀಮರು ಸಾರ್ವಜನಿಕ ಸ್ಥಳದಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಅವರಿಂದ 1 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ 2 ಕೆಜಿ 334 ಗ್ರಾಂ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ್ದ 7 ಲಕ್ಷ ರೂಪಾಯಿ ಮೌಲ್ಯದ ಸುಝುಕಿ ಎಕ್ಸ್‌ಎಲ್‌ಆರ್ ಕಾರು, 30 ಸಾವಿರದ ಹೊಂಡಾ ಡಿಯೋ ಬೈಕ್, 5 ಮೊಬೈಲ್‌ಗಳು ಹಾಗೂ 46 ಸಾವಿರ ನಗದು ಹಣ ಸೇರಿ ಒಟ್ಟು 9,21,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Tags:

error: Content is protected !!