• ಬೆಳಗಾವಿಯಲ್ಲಿ ಡಿಕೆಶಿ ಪ್ರಮಾಣವಚನ ನೇರ ಪ್ರಸಾರ
• ಮೃಣಾಲ್ ಹೆಬ್ಬಾಳ್ಕರ್ ನೇತೃತ್ವದಲ್ಲಿ ಎಲ್ಇಡಿ ವ್ಯವಸ್ಥೆ
• ರಾಣಿ ಚನ್ನಮ್ಮ ವೃತ್ತದಲ್ಲಿ ಭರ್ಜರಿ ಕ್ಷೀರಾಭಿಷೇಕ
• ಜಾರಕಿಹೊಳಿ, ಹೆಬ್ಬಾಳ್ಕರ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ

ರಾಜ್ಯ ರಾಜಕಾರಣದ ಐತಿಹಾಸಿಕ ಕ್ಷಣಕ್ಕೆ ಗಡಿ ಜಿಲ್ಲೆ ಬೆಳಗಾವಿ ಸಾಕ್ಷಿಯಾಯಿತು. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದನ್ನು ಕಣ್ಣುಂಬಿಕೊಳ್ಳಲು ಬೆಳಗಾವಿಯ ಕಾಂಗ್ರೆಸ್ ಭವನದ ಎದುರು ಬೃಹತ್ ಪರದೆ ಅಳವಡಿಸಲಾಗಿತ್ತು. ಪ್ರಮಾಣವಚನ ಮುಗಿಯುತ್ತಿದ್ದಂತೆ ಚನ್ನಮ್ಮ ವೃತ್ತದಲ್ಲಿ ಭವ್ಯ ವಿಜಯೋತ್ಸವ ನಡೆಸಿ ಕಾರ್ಯಕರ್ತರು ಸಂಭ್ರಮಿಸಿದರು.

ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ನಗರದ ಕಾಂಗ್ರೆಸ್ ಭವನದ ಎದುರು ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಿ, ಬುಧವಾರ ಮಧ್ಯಾಹ್ನ 3 ಗಂಟೆಯಿಂದಲೇ ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಒಟ್ಟಾಗಿ ಜಮಾಯಿಸಿದ್ದರು. ಪಕ್ಷದ ಧ್ವಜಗಳು ಹಾಗೂ ಬ್ಯಾನರ್‌ಗಳನ್ನು ಹಿಡಿದು ಬಂದಿದ್ದ ಕಾರ್ಯಕರ್ತರು, ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಜಯಘೋಷಗಳನ್ನು ಕೂಗಿ, ತಮಟೆ ಬಾರಿಸಿ ಹಬ್ಬದ ವಾತಾವರಣ ನಿರ್ಮಿಸಿದ್ದರು.
ಲೋಕಭವನದಲ್ಲಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಭವನದಿಂದ ನಗರದ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದವರೆಗೆ ಸಹಸ್ರಾರು ಕಾರ್ಯಕರ್ತರ ಭವ್ಯ ಮೆರವಣಿಗೆ ನಡೆಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಅಭಿಮಾನಿಗಳು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೆರವೇರಿಸಿ ಭಕ್ತಿ-ಅಭಿಮಾನ ಮೆರೆದರು. ಡಿಜೆ ತಾಳಕ್ಕೆ ತಕ್ಕಂತೆ ಯುವಕರು, ಮಹಿಳೆಯರು, ವೃದ್ಧರು ಎಲ್ಲರೂ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಯುವಾ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರು ಸುಮಾರು 38 ವರ್ಷಗಳ ಕಾಲದ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಗಳಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಬೆಳಗಾವಿಯ ಹೆಮ್ಮೆಯ ಪುತ್ರ, ಉತ್ತರ ಕರ್ನಾಟಕದ ನಾಯಕ ಸತೀಶ್ ಜಾರಕಿಹೊಳಿ ಅವರು ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣವಚವನ್ನು ಸ್ವೀಕರಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಿದ್ದು, ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ಸಿದ್ಧರಾಮಯ್ಯನವರು ಇಷ್ಟು ವರ್ಷಗಳ ಕಾಲ ನೀಡಿದ ಆಡಳಿತದಂತೆ ಡಿ.ಕೆ.ಶಿವಕುಮಾರ್ ಅವರು ಕೂಡ ಒಳ್ಳೆಯ ಆಡಳಿತ ನೀಡಿದ್ದಾರೆ. ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಳ್ಳೆಯ ಕೆಲಸ ಮಾಡಿದ್ದು, ಬರುವಂತಹ ದಿನಗಳಲ್ಲಿ ಹೈಕಮಾಂಡ್ ಸೂಕ್ತ ಸ್ಥಾನಮಾನವನ್ನು ನೀಡಲಿದೆ.
