Kittur

ಗೋಹತ್ಯೆ ಖಂಡಿಸಿ ಕಿತ್ತೂರು ಬಂದ್ ಯಶಸ್ವಿ: ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್‌ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ!

Share

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಗೋಹತ್ಯೆ ಖಂಡಿಸಿ ಹಾಗೂ ಗೋ ರಕ್ಷಕರ ಮೇಲಿನ ಹಲ್ಲೆಯನ್ನು ವಿರೋಧಿಸಿ ಇಂದು ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆದ ಈ ಸ್ವಯಂ ಪ್ರೇರಿತ ಬಂದ್‌ಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

ಕಿತ್ತೂರಿನಲ್ಲಿ ಗೋಹತ್ಯೆ ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಹಾಗೂ ಅವರ ಮೇಲೆಯೇ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ವಿವಿಧ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ, “ಗೋಹತ್ಯೆ ತಡೆಯಲು ಹೋದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಿಂದೂ ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಮಾಜ ಸಹಿಸುವುದಿಲ್ಲ. ಸರ್ಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ಸಮಾಜ ಹಾಗೂ ಗೋರಕ್ಷಣೆಗಾಗಿ ನಡೆಯುವ ನಮ್ಮ ಹೋರಾಟ ನಿರಂತರವಾಗಿದ್ದು, ಯಾವುದೇ ಒತ್ತಡಕ್ಕೂ ನಾವು ಮಣಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಿತ್ತೂರು ಕ್ಷೇತ್ರದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ್ರ ಮಾತನಾಡಿ, ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದರು. ಧರಣಿ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು, “ಕಾರ್ಯಕರ್ತರ ಮೇಲೆ ಕೇಸ್ ಹಾಕುವ ಮುನ್ನ ನನ್ನ ಮೇಲೆ ಕೇಸ್ ಹಾಕಿ ನೋಡಿ” ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು.
ಬಳಿಕ ಕಿತ್ತೂರು ತಹಶೀಲ್ದಾರ್ ಕಲ್ಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ್, ಇನ್ನು ಮುಂದೆ ತಾಲೂಕಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Tags:

error: Content is protected !!