ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಇಂದಿನಿಂದ ಹೊಸ ಕಠಿಣ ನಿಯಮ ಜಾರಿಗೆ ಬಂದಿದೆ. ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತರಾದ ಕಾರ್ತೀಕ್ ಎಂ. ಅವರು, ಸಾರ್ವಜನಿಕರು ಇನ್ಮುಂದೆ ನಾಲ್ಕು ಪ್ರತ್ಯೇಕ ವಿಧಗಳಲ್ಲಿ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು ಎಂದು ಕಡ್ಡಾಯಗೊಳಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತೀಕ್ ಎಂ. ಅವರು, ನಗರದ ಸ್ವಚ್ಛತೆ ಮತ್ತು ತ್ಯಾಜ್ಯ ಮುಕ್ತ ನಿರ್ವಹಣೆಗಾಗಿ ಹೊಸ ಕಟ್ಟುನಿಟ್ಟಿನ ನಿಯಮವನ್ನು ಪ್ರಕಟಿಸಿದರು. ಇನ್ಮುಂದೆ ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಕಸವನ್ನು ವೆಟ್ (ಹಸಿ), ಡ್ರೈ (ಒಣ), ಸ್ಯಾನಿಟರಿ ಮತ್ತು ಸ್ಪೆಷಲ್ ಕೇರ್ ವೇಸ್ಟ್ ಹೀಗೆ ಒಟ್ಟು 4 ವಿಧಗಳಲ್ಲಿ ಕಡ್ಡಾಯವಾಗಿ ವಿಂಗಡಿಸಬೇಕಾಗುತ್ತದೆ. ಇವುಗಳನ್ನು ಪ್ರತ್ಯೇಕ ಬ್ಯಾಗುಗಳಲ್ಲಿ ತುಂಬಿಸಿ ಪಾಲಿಕೆಯ ವಿಲೇವಾರಿ ವಾಹನಗಳಿಗೆ ನೀಡಬೇಕು. ವಿಶೇಷವಾಗಿ ಸ್ಪೆಷಲ್ ಕೇರ್ ವೇಸ್ಟ್ ಅಡಿಯಲ್ಲಿ ಬರುವ ವಿದ್ಯುತ್ ಬಲ್ಬ್, ಇಂಜೆಕ್ಷನ್ ಸಿರಿಂಜ್ಗಳು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಪ್ರತ್ಯೇಕವಾಗಿಯೇ ನೀಡಬೇಕು ಎಂದು ಸ್ಪಷ್ಟಪಡಿಸಿದ ಆಯುಕ್ತರು, ನಗರದ ಸುಂದರ ಪರಿಸರಕ್ಕಾಗಿ ಸಾರ್ವಜನಿಕರು ಪಾಲಿಕೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.

