ರಾಜ್ಯಾದ್ಯಂತ ನೂತನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅತ್ಯಂತ ವಿಭಿನ್ನ ಹಾಗೂ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಒಂದನೇ ತರಗತಿಗೆ ಪಾದಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಭವ್ಯ ಮೆರವಣಿಗೆ ನಡೆಸಿ, ಶಾಲೆಗೆ ಕರೆತಂದು ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು.


ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಮೊದಲ ದಿನದ ಅಂಗವಾಗಿ, ಶಾಲಾ ವಿದ್ಯಾರ್ಥಿಗಳನ್ನು ಮದುಮಗಳಂತೆ ಶೃಂಗಾರಗೊಂಡಿದ್ದ ಶಾಲೆಗೆ ಅತ್ಯಂತ ಸಡಗರದಿಂದ ಸ್ವಾಗತಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ (SDMC) ಕಮಿಟಿಯ ಪದಾಧಿಕಾರಿಗಳು ಜಂಟಿಯಾಗಿ ಇಡೀ ಶಾಲಾ ಆವರಣವನ್ನು ತಳಿರು ತೋರಣ ಮತ್ತು ಬಣ್ಣ ಬಣ್ಣದ ಬಲೂನ್‌ಗಳಿಂದ ಸೃಜನಾತ್ಮಕವಾಗಿ ಅಲಂಕರಿಸಿದ್ದರು.


ವಿಶೇಷವಾಗಿ ಈ ವರ್ಷ ಒಂದನೇ ತರಗತಿಗೆ ಹೊಸದಾಗಿ ದಾಖಲಾದ ಪುಟಾಣಿ ಮಕ್ಕಳನ್ನು ತರಹೇವಾರಿ ಹೂವುಗಳಿಂದ ಶೃಂಗರಿಸಲಾಗಿದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕುಳ್ಳಿರಿಸಿ, ಢೋಲ್-ತಾಶಾಗಳ ಮೇಳಗಳೊಂದಿಗೆ ಇಡೀ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕ ಶಿಕ್ಷಣದ ಜಾಗೃತಿಗಾಗಿ ಭವ್ಯ ಮೆರವಣಿಗೆ ನಡೆಸಲಾಯಿತು. ಇನ್ನು ಮೆರವಣಿಗೆ ಮುಗಿಸಿ ಶಾಲೆಗೆ ಆಗಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಾಲೆಯ ಶಿಕ್ಷಕರು ಪ್ರೀತಿಯಿಂದ ಗುಲಾಬಿ ಹೂವು ಹಾಗೂ ಸಿಹಿ ತಿನ್ನಿಸುವ ಮೂಲಕ ನೂತನ ಶೈಕ್ಷಣಿಕ ವರ್ಷಕ್ಕೆ ಅತ್ಯಂತ ಆತ್ಮೀಯವಾಗಿ ಸ್ವಾಗತ ಕೋರಿದರು.

