ಗೋವಾಕ್ಕೆ ಪ್ರವೇಶಿಸುವ ಬೆಳಗಾವಿಯ ಪ್ರವಾಸಿ ಹಾಗೂ ನಿತ್ಯ ಪ್ರಯಾಣಿಕರ ವಾಹನಗಳ ಮೇಲೆ ವಿಧಿಸಲಾಗುತ್ತಿದ್ದ ಅತಿಯಾದ ಸಂಚಾರ ದಂಡಕ್ಕೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ಈ ಕುರಿತು ಸಲ್ಲಿಕೆಯಾದ ಮನವಿಗೆ ಸ್ಪಂದಿಸಿರುವ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಮೊದಲ ಬಾರಿಯ ತಪ್ಪುಗಳಿಗೆ ದಂಡ ಕಡಿತಗೊಳಿಸಿ ಕೇವಲ ಎಚ್ಚರಿಕೆ ನೀಡುವ ವಿಶೇಷ ಗ್ಯಾಜೆಟ್ (ಆದೇಶ) ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಗೋವಾ ಸಂಚಾರ ಪೊಲೀಸರು ಅಲ್ಲಿಗೆ ಪ್ರವೇಶಿಸುವ ಬೆಳಗಾವಿ ಹಾಗೂ ಇತರ ಪ್ರವಾಸಿ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಸೇರಿದಂತೆ ವಿವಿಧ ಕಾರಣಗಳಿಗಾಗಿ ಶೇಕಡಾ 200 ರಷ್ಟು ಅಂದರೆ ಬರೋಬ್ಬರಿ 10,000 ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾದ ಮನವಿ ಪತ್ರದಲ್ಲಿ ದೋಷಯುಕ್ತ ಡಿಜಿಟಲ್ ಇ-ಚಲನ್ ವ್ಯವಸ್ಥೆ, ರಸ್ತೆಗಳಲ್ಲಿ ಸ್ಪಷ್ಟ ಸಂಚಾರ ಚಿಹ್ನೆಗಳ ಕೊರತೆ, ಬಾಡಿಗೆ ವಾಹನಗಳ ಮೇಲಿನ ಅತಿಯಾದ ದಂಡ ಪ್ರಯೋಗದಿಂದ ಪ್ರವಾಸೋದ್ಯಮದ ಮೇಲಾಗುತ್ತಿರುವ ನಕಾರಾತ್ಮಕ ಪರಿಣಾಮ ಹಾಗೂ ಬಡ ದಿನಗೂಲಿ ನೌಕರರ ಮೇಲಿನ ಆರ್ಥಿಕ ಹೊರೆಯನ್ನು ಗೋವಾ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ಸಾರ್ವಜನಿಕರ ಸಮಸ್ಯೆಗಳನ್ನು ಅತ್ಯಂತ ಸಹಾನುಭೂತಿಯಿಂದ ಆಲಿಸಿದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು, ಗೋವಾ ಮತ್ತು ಬೆಳಗಾವಿಯ ಜನರ ಹಿತದೃಷ್ಟಿಯಿಂದ ಸಣ್ಣಪುಟ್ಟ ಮತ್ತು ಜೀವಕ್ಕೆ ಅಪಾಯವಿಲ್ಲದ ನಿಯಮ ಉಲ್ಲಂಘನೆಗಳಿಗೆ ತಕ್ಷಣವೇ ದೊಡ್ಡ ಮೊತ್ತದ ದಂಡ ವಿಧಿಸದೇ, ಮೊದಲ ಬಾರಿಗೆ ಕೇವಲ ‘ಎಚ್ಚರಿಕೆ’ ನೀಡಿ ಬಿಡುವ ಹಾಗೂ ದಂಡದ ಮೊತ್ತವನ್ನು ಕನಿಷ್ಠಗೊಳಿಸುವ ಹೊಸ ನಿಯಮಾವಳಿಯ ಗ್ಯಾಜೆಟ್ ಅನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಸಕಾರಾತ್ಮಕ ಭರವಸೆ ನೀಡಿದ್ದಾರೆ.
