BELAGAVI

ನಾಮಫಲಕಗಳಲ್ಲಿ ಮರಾಠಿ ಅನುಷ್ಠಾನಕ್ಕೆ ಎಂಇಎಸ್ ಪಟ್ಟು… ಜೂನ್ 22 ರಂದು ಜಿಲ್ಲಾಧಿಕಾರಿ ಕಚೇರಿಗೆ ವಿರಾಟ್ ಮೋರ್ಚಾ; 29 ಕ್ಕೆ ಮಹಾರಾಷ್ಟ್ರ ಸಿಎಂ ನಿವಾಸದ ಎದುರು ಪ್ರತಿಭಟನೆಗೆ ನಿರ್ಧಾರ!

Share

ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡದ ಜೊತೆಗೆ ಶೇಕಡಾ 40 ರಷ್ಟು ಮರಾಠಿ ಭಾಷೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜೂನ್ 22 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೋರ್ಚಾ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಖಾನಾಪುರ ರಸ್ತೆಯ ಮರಾಠಾ ಮಂದಿರದಲ್ಲಿ ಶನಿವಾರ ನಡೆದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡದ ಜೊತೆಗೆ ಶೇ. 40 ರಷ್ಟು ಮರಾಠಿ ಭಾಷೆಗೆ ಪ್ರಾಧಾನ್ಯತೆ ನೀಡಿ ಸರ್ಕಾರಿ ಕಚೇರಿಗಳು, ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮರಾಠಿ ಅನುಷ್ಠಾನಗೊಳಿಸಬೇಕು ಎಂದು ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಆಗ್ರಹಿಸಿದೆ. ಖಾನಾಪುರ ರಸ್ತೆಯ ಮರಾಠಾ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಮರಗಾಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಘಟಕ ಸಮಿತಿಗಳ ಪ್ರಮುಖ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳಲ್ಲಿ ಈ ಬೇಡಿಕೆ ಈಡೇರದಿದ್ದರೆ ಜೂನ್ 22, 2026 ರಂದು ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೋರ್ಚಾ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಪ್ರಕಾಶ್ ಮರಗಾಳೆ ಅವರು, ಕಳೆದ ಮೇ 21 ರಂದು ನಡೆದ ಸಭೆಯ ತೀರ್ಮಾನದಂತೆ ಇಂದು ಘಟಕ ಸಮಿತಿಗಳ ಸಭೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು. ಇದರನ್ವಯ ಮುಂಬರುವ ಜೂನ್ 3 ರಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನಾಮಫಲಕಗಳಲ್ಲಿ ಕನ್ನಡದ ಜೊತೆಗೆ ಮರಾಠಿಗೂ ಅವಕಾಶ ನೀಡಬೇಕು ಎಂದು ವಿನಂತಿಸಲಾಗುವುದು. ಒಂದು ವೇಳೆ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜೂನ್ 22 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು.

ಇದೇ ವೇಳೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ವಿಚಾರಣೆ ಶೀಘ್ರ ಆರಂಭವಾಗುವಂತೆ ಪ್ರಯತ್ನಿಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಬರುವ ಸೋಮವಾರದೊಳಗೆ ಪತ್ರ ಬರೆದು, ಜೂನ್ 29 ರೊಳಗೆ ಉನ್ನತ ಅಧಿಕಾರ ಸಮಿತಿ ಮತ್ತು ವಕೀಲರ ಸಭೆ ನಡೆಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಚುರುಕುಗೊಳಿಸಲು ವಿನಂತಿಸಲಾಗುವುದು. ಈ ಬೇಡಿಕೆಗೆ ಸ್ಪಂದಿಸದಿದ್ದರೆ ಜೂನ್ 29 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿವಾಸದ ಎದುರು ಧರಣಿ ಸತ್ಯಾಗ್ರಹ ಮತ್ತು ನಿಡರ್ಶನಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.

 

Tags:

error: Content is protected !!