Vijaypura

ಫೈರಿಂಗ್ ನಡೆಸಿ 6 ಜನರ ಭೀಕರ ಹತ್ಯೆ ಕೇಸ್: ಭೀಮಾತೀರಕ್ಕೆ ಐಜಿಪಿ ಸಂದೀಪ ಪಾಟೀಲ ಭೇಟಿ

Share

ಹೆಣ್ಣು, ಹೊನ್ನು, ಮಣ್ಣಿಗಾಗಿ ಹಗೆತನಕ್ಕೆ ಬಿದ್ದ ಅದೆಷ್ಟೋ ಪ್ರತಿಷ್ಠಿತ ಮನೆತನಗಳೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅದರಂತೆ ಜಮೀನಿನ ಬದುವೊಂದರ ವಿಚಾರವಾಗಿ ಕಳೆದ 4 ದಶಕಗಳ ಹಿಂದೆ ಭೀಮಾತೀರದಲ್ಲಿನ ಚಡಚಣದಲ್ಲಿ ಭೈರಗೊಂಡ-ಚಡಚಣ ಕುಟುಂಬಗಳ ಮದ್ಯೆ ಶುರುವಾಗಿದ್ದ ಹತ್ಯಾಕಾಂಡಗಳು ಸಾಲು, ಸಾಲು ಹೆಣಗಳು ಬಿದ್ದರೂ ಇನ್ನೂ ನಿಂತಿಲ್ಲ. ಈ ಎರಡು ಕುಟುಂಬಗಳ ಮಧ್ಯ ಶುರುವಾದ ವ್ಯಾಜ್ಯ ದಿನಗಳುರಿಳಿದಂತೆ ತಲೆಗಳುರುಳಿ ಅನೇಕ ಕುಟುಂಬಗಳ ಸಮಾಧಿಯನ್ನೇ ಕಟ್ಟಿವೆ. ಈ ಹಿಂದೆ ಅಲೋಕಕುಮಾರ ಅವರು ಉತ್ತರ ವಲಯ ಐಜಿಪಿ ಇದ್ದಾಗ ಇದೆಲ್ಲವೂ ಇಲ್ಲಿಗೆ ನಿಲ್ಲಬೇಕೆಂದು ಹಗೆತನದ ಕುಟುಂಬಗಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಮಾಡಿದರೂ ಅಷ್ಟೆನೂ ಸಫಲತೆ ಕಂಡಿಲ್ಲ. ಆದರೆ, ನಿನ್ನೆ ನಡೆದ ಭಯಾಕನ 6 ಜನರ ಹತ್ಯೆಯ ಘಟನೆ ಮತ್ತೆ ಭೀಮಾತೀರದ ಕ್ರೌರ್ಯ ಮೆರೆದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು…ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವಪುತ್ರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಹಿನ್ನೆಲೆ ನೋಡೊದಾದ್ರೆ ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳುಮೆ ಇಲ್ಲದೇ ಹಾಗೇ ಉಳಿದಿತ್ತು.

 

ಹೀಗೆ ಉಳುಮೆ ಇಲ್ಲದೆ ಬಿದ್ದಿದ್ದ ಜಮೀನು ಖರೀದಿಸಿ ಕೊಲೆಯಾದರಾ? ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯ ಮೂಡಿದ್ದ ವೈಷ್ಯಮ್ಯ ಇಂದು ಸ್ಫೋಟಗೊಂಡಿದೆ. ಜಮೀನಿನ ಕುರಿತು ತಕರಾರು ಇದೆಂದು ಹೇಳಿದ್ದರೂ ಅದೇ ಜಮೀನು ಖರೀದಿಸಿ ಉಳುಮೆಗೆ ಮುಂದಾಗಿದ್ದರಿಂದ ತಳವಾರ ಕುಟುಂಬದವರು ಕುಪಿತಗೊಂಡು ಅವರ ಕಡೆಯವರೇ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಂಧನವಾದ ಬಳಿಕಷ್ಟೆ ನಿಖರ ಮಾಹಿತಿ ದೊರೆಯಲಿದೆ. ಇನ್ನೂ ಸ್ಥಳಕ್ಕೆ ಬೆಳಗಾವಿ ವಲಯ ಐಜಿಪಿ ಸಂದೀಪ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೂ ಕೊಲೆಯಾದ ಘಟನಾ ಸ್ಥಳಕ್ಕೆ ಬೆಳಗಾವಿ ಐಜಿಪಿ ಸಂದೀಪ ಪಾಟೀಲ ಭೇಟಿ ನೀಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್‌ ತಂಡಗಳು ಹಾಗೂ 4 ಕೆಎಸ್‌ಆರ್‌ಪಿ ತಂಡಗಳನ್ನು ನಿಯೋಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಇನ್ನೂ ಸ್ಥಳದಲ್ಲಿ ಬಿಗುವಿನ, ಉದ್ವಿಗ್ನ ವಾತಾವರಣ ಇದ್ದು ಈ ಘಟನೆ ವಿಜಯಪುರ ಜಿಲ್ಲೆಯ ಜನತೆಯನ್ನು ಬೆಚ್ಚಬಿಳಿಸಿದೆ.

Tags:

error: Content is protected !!