ಕೇಂದ್ರ ಸರ್ಕಾರ ಎಲ್.ಪಿ.ಜಿ ಮತ್ತು ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬೆಳಗಾವಿ ಮಹಿಳಾ ಕಾಂಗ್ರೆಸ್’ನ ವತಿಯಿಂದ ನಡುರಸ್ತೆಯಲ್ಲಿ ಒಲೆ ಹೂಡಿ ಅಡುಗೆ ಮಾಡಿ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಯಿತು. ಅಲ್ಲದೇ ಬೆಲೆ ಇಳಿಕೆಗೆ 7 ದಿನದ ಗಡುವು ನೀಡಲಾಯಿತು.


ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿ ಕಾಂಗ್ರೆಸ್’ನ ಮಹಿಳಾ ಕಾರ್ಯಕರ್ತರು ನಡು ರಸ್ತೆಯಲ್ಲಿ ಒಲೆ ಹೂಡಿ ಅಡುಗೆ ಮಾಡಿ, ಚಹಾ ತಯಾರಿಸಿ ಜನರಿಗೆ ಹಂಚಿ ಬೊಬ್ಬೆ ಹೊಡೆಯುತ್ತ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಿದರು.


ಈ ವೇಳೆ ಮಾತನಾಡಿದ ಪ್ರತಿಭಟನಾ ನಿರತರಾದ ಆಯೇಷಾ ಸನದಿ ಅವರು ಪಿಎಂ ಮೋದಿ ಅವರ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ. ಮಮತಾ ಬ್ಯಾನರ್ಜಿಯನ್ನು ಸೋಲಿಸಲು 1 ವರ್ಷದ ಮಟ್ಟಕ್ಕೆ ನಮ್ಮ ಬಳಿ ಎಲ್.ಪಿ.ಜಿ. ಪೆಟ್ರೋಲ್, ಡಿಸೇಲ್ ಸ್ಟಾಕ್ ಇದೆ ಎಂದು ಹೇಳಿದ್ದೀರಿ. ಆದರೇ, ಈಗ ಯಾಕೆ ಜನರಿಗೆ ಮನೆಯಲ್ಲಿರಲು ಹೇಳುತ್ತಿದ್ದೀರಿ. ಸ್ವತಃ ತಾವೂ ವಿದೇಶಕ್ಕೆ ಹೋಗಿ ಚಾಕಲೇಟ್ ಕೊಡುತ್ತಿದ್ದೀರಿ. ಇಲ್ಲಿ ದೇಶದ ಪರಿಸ್ಥಿತಿ ಏನಾಗಿದೆ ನೋಡಿ. ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾಸ್ ಬೆಲೆ ಏರಿಕೆಗೆ ದೆಹಲಿಯಲ್ಲಿ ಸಿಲಿಂಡರ್ ಹೊತ್ತು ತಿರುಗಾಡಿದ್ದ ಸ್ಮೃತಿ ಇರಾಣಿ ಈಗೆಲ್ಲಿದ್ದಾರೆ? ನಾವು ಕೂಡ ಸಿಲಿಂಡರ್ ಹೊತ್ತು ದೆಹಲಿಗೆ ಬರ್ತೇವೆ. 7 ದಿನಗಳಲ್ಲಿ ಎಲ್.ಪಿ.ಜಿ., ಪೆಟ್ರೋಲ್ ಡಿಸೇಲ್ ಬೆಲೆ ಇಳಿಸದಿದ್ದರೇ, ದಿಲ್ಲಿ ಚಲೋ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಕೆಯನ್ನು ನೀಡಿದರು.

ಇನ್ನು ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷ ಲತಾ ಶಿವಾಜೀರಾವ್ ಮಾನೆ ಅವರು ಕೇಂದ್ರ ಸರ್ಕಾರ ಬೆಲೆ ಏರಿಕೆ ದೇಶದ ದುಡಿದು ತಿನ್ನುವ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಮಹಿಳೆಯರ ಕಣ್ಣೀರು ಕಪಾಳಿಗೆ ಬರುತ್ತಿವೆ. ಮಹಿಳಾ ವರ್ಗ ಸಂಕಷ್ಟಕ್ಕಿಡಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಕೇಂದ್ರ ಸರ್ಕಾರ ತಂದೊಡ್ಡಿದೆ. ಪಿಎಂ ಮೋದಿ ಅವರು ತಕ್ಷಣ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
