BELAGAVI

ಕರ್ನಾಟಕಕ್ಕೆ ಸಿಗಲಿದ್ದಾರಾ ಮೊದಲ ಮಹಿಳಾ ಡಿಸಿಎಂ?

Share

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಇದರ ಮಧ್ಯೆಯೇ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ವದಂತಿ ಬೆನ್ನಲ್ಲೇ, ಬೆಳಗಾವಿಯ ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ.

ರಾಜ್ಯದಲ್ಲಿ ಹೊಸ ಸರ್ಕಾರಿ ಸಮೀಕರಣಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಈ ಪೋಸ್ಟ್ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದ ಇತಿಹಾಸದಲ್ಲೇ ಇದುವರೆಗೆ ಯಾವುದೇ ಮಹಿಳಾ ನಾಯಕಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ, ಹೀಗಾಗಿ ಸೃಷ್ಟಿಯಾಗಲಿರುವ ನಾಲ್ಕು ಡಿಸಿಎಂ ಹುದ್ದೆಗಳಲ್ಲಿ ಒಂದು ಸ್ಥಾನವನ್ನು ಪ್ರಬಲ ಮಹಿಳಾ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ನೀಡುವ ಮೂಲಕ ಹೈಕಮಾಂಡ್ ಇತಿಹಾಸ ಸೃಷ್ಟಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಬ್ಬಾಳಕರ್ ಪರವಾಗಿ ಪೋಸ್ಟ್‌ಗಳು ಮತ್ತು ಹ್ಯಾಷ್‌ಟ್ಯಾಗ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಲಿಂಗಾಯತ ಸಮುದಾಯದ ಹಾಗೂ ಮಹಿಳಾ ಕೋಟಾದಡಿ ಅವರಿಗೆ ಈ ಉನ್ನತ ಜವಾಬ್ದಾರಿ ಸಿಗಲೇಬೇಕು ಎನ್ನುವುದು ಬೆಂಬಲಿಗರ ವಾದವಾಗಿದೆ. ಹೊಸ ಮುಖ್ಯಮಂತ್ರಿ ಪಟ್ಟದ ಕಸರತ್ತಿನ ನಡುವೆ, ಅಭಿಮಾನಿಗಳ ಈ ಹಠಾತ್ ಬೇಡಿಕೆ ಈಗ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!