BELAGAVI

ಬೆಳಗಾವಿಯಲ್ಲಿ ಕೇರ್ ಟೇಕರ್‌ನಿಂದಲೇ ಭಾರಿ ದರೋಡೆ: ಬೀಗ ಒಡೆಯದೇ 930 ಗ್ರಾಂ ಚಿನ್ನ ಎಗರಿಸಿದ್ದ ಖದೀಮ ಅರೆಸ್ಟ್, 73.3 ಲಕ್ಷದ ಸ್ವತ್ತು ವಶ!

Share

ವಿಶ್ವಾಸ ಇಟ್ಟು ಮನೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಕೇರ್ ಟೇಕರ್ ಒಬ್ಬ, ಮಾಲೀಕರಿಗೇ ಕೋಟಿ ರೂಪಾಯಿ ನಾಮ ಹಾಕಿರುವ ಆಘಾತಕಾರಿ ಘಟನೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.


ಮನೆಯಲ್ಲಿದ್ದ ಟ್ರೇಜರಿ ಅಥವಾ ಬೀಗವನ್ನು ಯಾವುದೇ ರೀತಿ ಒಡೆಯದೇ ಅತಿ ಚಾಣಾಕ್ಷತನದಿಂದ 930 ಗ್ರಾಂ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯನ್ನು ಕ್ಯಾಂಪ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾಹಿತಿಯನ್ನು ನೀಡಿದರು. ಕ್ಯಾಂಪ್ ಠಾಣಾ ವ್ಯಾಪ್ತಿಯ ನಿವಾಸಿ ಡಾ. ವಿಶ್ವನಾಥ್ ಧಡೇದ ಅವರ ಮನೆಯಲ್ಲಿ ನಡೆದಿದ್ದ ಈ ಭಾರಿ ಕಳವು ಕುರಿತು ಮೇ 11ರಂದು ಅವರ ಪತ್ನಿ ಅನ್ನಪೂರ್ಣಾ ಧಡೇದ್ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಕ್ರೈಂ ನಿರಂಜನ್‌ರಾಜೆ ಅರಸ್, ಖಡೇ ಬಝಾರ್ ಎಸಿಪಿ ಶೇಖರಪ್ಪ ಮತ್ತು ಕ್ಯಾಂಪ್ ಪಿಐ ಆನಂದ್ ನೇತೃತ್ವದ ವಿಶೇಷ ಪಡೆ ತನಿಖೆ ಕೈಗೊಂಡು, ಮನೆಯಲ್ಲೇ ಕೇರ್ ಟೇಕರ್ ಆಗಿದ್ದ ಕಾಗವಾಡ ಮೂಲದ ರಾಹುಲ್ ಸತೀಶ್ ಕಾಂಬಳೆ (27) ಎಂಬಾತನನ್ನು ಬಂಧಿಸಿದೆ. ಕಾಗವಾಡದ ಬಾಬಾಸಾಹೇಬ್ ಕಟಗೇರಿ ಎಂಬಾತನ ಮೂಲಕ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದು, 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ಹಾಗೂ ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನವಿಟ್ಟು 22.8 ಲಕ್ಷ ರೂ. ಸಾಲ ಪಡೆದಿದ್ದ ಚಿನ್ನ ಸೇರಿದಂತೆ ಒಟ್ಟು 73.3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನದ ವಶಕ್ಕಾಗಿ ತನಿಖೆ ಮುಂದುವರಿದಿದ್ದು, ಈ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ನಗದು ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರು ಮನೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣ ಇಡಬಾರದು ಎಂದು ಕಮಿಷನರ್ ಮನವಿ ಮಾಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಡಿಸಿಪಿಗಳಾದ ನಿರಂಜನ್‌ರಾಜೆ ಅರಸ್, ನಾರಾಯಣ್ ಬರಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!