ಆಸ್ತಿ ವಿವಾದದ ಹಿನ್ನೆಲೆ ಭೀಕರ ಹತ್ಯಾಕಾಂಡ ನಡೆದಿದ್ದು, 6 ಜನರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಜಮೀನು ಸಂಬಂಧಿತ ವಿವಾದ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವೈಷಮ್ಯ ಹತ್ಯಾಕಾಂಡಕ್ಕೆ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ. ಹತ್ಯೆಯಾದವರಲ್ಲಿ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ ನಿರಾಳೆ, ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು 6 ಜನರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹತ್ಯೆಯ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.

