ATTACK

ಕಾಗವಾಡ: ತೆಂಗಿನಕಾಯಿ ಮಾರಿದ ಹಣದ ಗಲಾಟೆ; ಕುಡಿದ ಮತ್ತಿನಲ್ಲಿ ಗೆಳೆಯನ ತಲೆಗೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ!

Share

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರೇ ಸೇರಿ ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತೆಂಗಿನಕಾಯಿ ಮಾರಾಟ ಮಾಡಿದ ಹಣದ ಹಂಚಿಕೆ ವಿಚಾರದಲ್ಲಿ ಉಂಟಾದ ವಾಗ್ವಾದವೇ ಈ ರಕ್ತಪಾತಕ್ಕೆ ಕಾರಣವಾಗಿದ್ದು, ಕಾಗವಾಡ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

 

ಐನಾಪುರ ಪಟ್ಟಣದ ನಿವಾಸಿ ಸಂತೋಷ್ ಸಿದ್ದಪ್ಪ ಕಮತೆ (33) ಎಂಬುವವರೇ ಕೊಲೆಯಾದ ದುರ್ದೈವಿ. ಸಂತೋಷ್ ತೋಟದಲ್ಲಿದ್ದ ತೆಂಗಿನ ಮರಗಳಿಂದ ಗೆಳೆಯರೊಂದಿಗೆ ಸೇರಿ ಸೋಮವಾರ ಮಧ್ಯಾಹ್ನ ತೆಂಗಿನಕಾಯಿ ಕೀಳಲಾಗಿತ್ತು. ಬಳಿಕ ಅದನ್ನು ಐನಾಪುರದಿಂದ ಉಗಾರದ ಅಂಗಡಿಯೊಂದರಲ್ಲಿ ಮಾರಾಟ ಮಾಡಿ, ಬಂದ ಹಣದಲ್ಲಿ ಮೂವರೂ ಸೇರಿ ಮದ್ಯಪಾನ ಮಾಡಿದ್ದಾರೆ.

ಮರಳಿ ಊರಿಗೆ ಬರುವಾಗ ಕಾಯಿ ಮಾರಿದ ಹಣದ ಲೆಕ್ಕಾಚಾರದ ವಿಚಾರದಲ್ಲಿ ಮೂವರ ನಡುವೆ ತೀವ್ರ ವಾದ-ವಿವಾದ ಸೃಷ್ಟಿಯಾಗಿದೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಗೆಳೆಯರು ಸಂತೋಷ್‌ನನ್ನು ತೀವ್ರವಾಗಿ ಥಳಿಸಿ, ಬಳಿಕ ದೊಡ್ಡ ಕಲ್ಲಿನಿಂದ ಆತನ ತಲೆ ಚಚ್ಚಿ ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ್ ಹಳ್ಳೂರ್, ಪಿಎಸ್ಐ ರಾಘವೇಂದ್ರ ಖೊತ ಹಾಗೂ ಬೆಳಗಾವಿಯ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಶಂಕಿತರನ್ನು ತೀವ್ರ ವಿಚಾರಣೆಗಾಗಿ ಬಂಧಿಸಿದ್ದು, ಇಡೀ ಐನಾಪುರ ಹಾಗೂ ಉಗಾರ ಪರಿಸರದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!