State

ಅಹಮದಾಬಾದ್ ನಂತರ ಭಾರತದ 2ನೇ ಅತಿದೊಡ್ಡ ಸ್ಟೇಡಿಯಂ ಆನೇಕಲ್‌ನಲ್ಲಿ: ಸಿಎಂ ಸಿದ್ದರಾಮಯ್ಯ ಹೆಮ್ಮೆ

Share

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯವಾಗಿ ಆನೇಕಲ್‌ನಲ್ಲಿ ಭಾರತದ 2ನೇ ಅತಿದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಬೃಹತ್ ಕ್ರೀಡಾಗ್ರಾಮ ಯೋಜನೆಗೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು, ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್‌ನಲ್ಲಿ ಹೊಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು. 943 ಕೋಟಿ ರೂಪಾಯಿಯ ಈ ಬೃಹತ್ ಯೋಜನೆಯು 80 ಎಕರೆಗಳಷ್ಟು ವಿಸ್ತೀರ್ಣದಲ್ಲಿದ್ದು, 80,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಲಿದೆ. ಇದು ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಇದಾಗಿದೆ.

ಸಿಎಂ ಸಿದ್ಧರಾಮಯ್ಯನವರು ಆನೇಕಲ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಅಂತರರಾಷ್ಟ್ರೀಯ ಕ್ರೀಡಾಂಗಣವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಂತರ ಭಾರತದಲ್ಲೇ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಲಿದೆ. ಇದು ಕ್ರೀಡಾ ಲೋಕದಲ್ಲಿ ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸಲಿದೆ. ಈ ಬೃಹತ್ ಕ್ರೀಡಾಂಗಣವನ್ನು ಕರ್ನಾಟಕ ಗೃಹ ಮಂಡಳಿಯ (KHB) ಸ್ವಂತ ನಿಧಿಯಿಂದಲೇ ನಿರ್ಮಿಸಲಾಗುತ್ತಿದ್ದು, ಸರ್ಕಾರದ ಬೊಕ್ಕಸದಿಂದ ಯಾವುದೇ ಹಣಕಾಸಿನ ನೆರವು ಪಡೆಯುತ್ತಿಲ್ಲ. ಇದು ಕೆಎಚ್‌ಬಿಯ ದೂರದೃಷ್ಟಿಯ ಯೋಜನೆಗೆ ಸಾಕ್ಷಿ.”ಈ ಯೋಜನೆಯಿಂದ ಕೇವಲ ಕ್ರೀಡೆಗೆ ಮಾತ್ರವಲ್ಲ, ಆನೇಕಲ್ ಸುತ್ತಮುತ್ತಲಿನ ಹಳ್ಳಿಗಳ ಆರ್ಥಿಕತೆಗೂ ಭಾರಿ ಬಲ ಸಿಗಲಿದೆ. ಪ್ರವಾಸೋದ್ಯಮ ಬೆಳೆಯಲಿದ್ದು, ಸ್ಥಳೀಯರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು. 2025ರ ಜೂನ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದ ನಂತರ ಜಸ್ಟಿಸ್ ಜಾನ್ ಮೈಕಲ್ ಕುನ್ಹಾ ಸಮಿತಿಯು ಆ ಕ್ರೀಡಾಂಗಣ ಸುರಕ್ಷಿತವಲ್ಲ ಎಂದು ವರದಿ ನೀಡಿತ್ತು. ಹೀಗಾಗಿ ಸುರಕ್ಷಿತ ಮತ್ತು ಸುಸಜ್ಜಿತವಾದ ಪರ್ಯಾಯ ಕ್ರೀಡಾಂಗಣದ ಅಗತ್ಯವಿದ್ದುದರಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮರಕ್ಕೆ ಬೇರೆಷ್ಟು ಮುಖ್ಯವೋ, ಜನಕ್ಕೆ ನಂಬಿಕೆಯೂ ಅಷ್ಟೇ ಮುಖ್ಯ. ಆನೇಕಲ್ ತಾಲೂಕಿಗೆ ಹೊಸ ರೂಪವನ್ನು ಕೊಡುವ ಕೆಲಸವನ್ನು ಡಿ.ಕೆ.ಸುರೇಶ್ ಮತ್ತು ಶಿವಲಿಂಗೇಗೌಡ ಅವರು ಮಾಡಿದ್ದಾರೆ. ಸುಮಾರು 2000 ಸಾವಿರ ಕೋಟಿಯಲ್ಲಿ ಈ ಬೃಹತ್ ಅಂತರಾಷ್ಟ್ರೀಯ ಕ್ರೀಡಾಗ್ರಾಮವನ್ನು ಕಟ್ಟಿದ್ದಾರೆ. ಈ ಭಾಗದಲ್ಲಿ ಭೂಮಿಯನ್ನು ಕಳೆದುಕೊಂಡ ರೈತರ ಆಸ್ತಿಮೌಲ್ಯವನ್ನು ಹೆಚ್ಚಿಸಲು ಮತ್ತು ಕ್ರೀಡಾಳುಗಳಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಮಾಡಿದ್ದಾರೆ. ಇದು ಬೆಂಗಳೂರಿ ನಗರದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ನೀಗಿಸಲು ಪೂರಕವಾಗಿದೆ ಎಂದರು.

ಈ ಸಂದರ್ಭದಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಎಚ್.ಎಂ. ರೇವಣ್ಣ, ಸಂಪತ್ ರಾಜ್, ವೇಣುಗೋಪಾಲ್, ಮನೋಹರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!