ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್. ಆರ್. ನಿರಂಜನ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಜ್ಞಾನದ ಶ್ರೇಷ್ಠತೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.


ಬೆಳಗಾವಿ: ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭವನ್ನು ಗುರುವಾರ ದಿನಾಂಕ 21 ಮೇ 2026 ರಂದು ಬೆಳಿಗ್ಗೆ 10:00 ಗಂಟೆಗೆ ಕೆ ಎಲ್ ಇ ಸಂಸ್ಥೆಯ ಜೆ ಎನ್ ಎಂ ಸಿ ಆವರಣದ ಡಾ. ಬಿ. ಎಸ್. ಜೀರಿಗೆ ಸಭಾಂಗಣದ ಕೆ ಎಲ್ ಇ ಸೆಂಟನರಿ ಕನ್ವೆನಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ಸಭೆಗೂ ಮುನ್ನ ಭವ್ಯ ಶಿಸ್ತುಬದ್ಧ ಮೆರವಣಿಗೆ ಮೂಲಕ ಗಣ್ಯರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.


ತದನಂತರ ನಡೆದ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್. ಆರ್. ನಿರಂಜನ್ ಅವರು, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪ್ರಾಧ್ಯಾಪಕರು ಮತ್ತು ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ಕೆ ಎಲ್ ಇ ಸಂಸ್ಥೆಯು ಈ ಭಾಗದ ಕಾಮಧೇನುವಾಗಿದೆ ಎಂದು ಶ್ಲಾಘಿಸಿದರು. ಇಂದಿನ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕು. ಜಗತ್ತಿನಲ್ಲಿ ಜ್ಞಾನಕ್ಕೆ ಭಾರತ ದೇಶ ಶ್ರೇಷ್ಠ ಸ್ಥಾನ ಪಡೆದಿದೆ. ಪ್ರತಿಯೊಬ್ಬರೂ ಶಿಕ್ಷಣದ ವಿವಿಧ ಆಯಾಮಗಳನ್ನು ಪಡೆಯಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನದ ಶಿಸ್ತು, ಕೌಶಲ್ಯ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡಬೇಕು. ಪ್ರಸ್ತುತ ದಿನಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಮತ್ತು ಹಲವು ಸಂಶೋಧನೆ ಕೇಂದ್ರಗಳನ್ನು ಮಹಾವಿದ್ಯಾಲಯದಲ್ಲಿ ಸ್ಥಾಪಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಮುಂದುವರಿದು ಮಾತನಾಡಿದ ಅವರು, ಸರಿಯಾದ ಪಠ್ಯ ವಿಷಯಗಳನ್ನು ಅಳವಡಿಸಿಕೊಳ್ಳಬೇಕು. ಮೂಲ ವಿಜ್ಞಾನದಲ್ಲಿ ಹೊಸ ಹೊಸ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳನ್ನು ಕಲಿಸಬೇಕು. ಮೊಬೈಲ್ ಅನ್ನು ಕೇವಲ ಸಂಪರ್ಕಕ್ಕೆ ಮಾತ್ರ ಬಳಕೆ ಮಾಡಬೇಕು ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಸ್ಪೂರ್ತಿದಾಯಕ ಉಪನ್ಯಾಸಕರ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸ್ವೀಕರಿಸಿ, ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು. ಉನ್ನತ ಶಿಕ್ಷಣವನ್ನು ಯುವಕರು ಸರಿಯಾಗಿ ಅಧ್ಯಯನ ಮಾಡಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಕೃತಕ ಜ್ಞಾನದ (Artificial Intelligence) ಶಿಕ್ಷಣ ಅಗತ್ಯವಾಗಿದ್ದು, ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳಬೇಕು. ಜಾಗತೀಕರಣದಲ್ಲಿ ಶಿಕ್ಷಣವು ಶ್ರೇಷ್ಠ ಸ್ಥಾನಮಾನ ಪಡೆದಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬೈಟ್
ಇದಕ್ಕೂ ಮುನ್ನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜ್ಯೋತಿ ಎಸ್. ಕವಳೇಕರ ಅವರು ಪ್ರಸ್ತಾವಿಕವಾಗಿ ಮಾತನಾಡಿ, ವರದಿ ವಾಚಿಸಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರೊ. ವಿನಯಕುಮಾರ ಅವರು ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಡಾ. ವಿಜಯಲಕ್ಷ್ಮಿ ಪಾಟೀಲ್ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಇನ್ನೊಬ್ಬ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಮಾತನಾಡಿ, ವಿದ್ಯಾರ್ಥಿಗಳ ಸಂಬಂಧಗಳು ಶ್ರೇಷ್ಠ ಸಾಧಕರ ಜೊತೆಗೆ ಇರಬೇಕು ಎಂದು ಹೇಳಿದ ಅವರು, ಇಂದಿನ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಕಾಲೇಜು ಶಿಕ್ಷಣ ಸಂಸ್ಥೆಗಳ ಕಾರ್ಯಕಾರಿಣಿ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಸನ್ಮಾನ್ಯ ಮಹಾಂತೇಶ ಎಂ. ಕವಟಗಿಮಠ ಅವರು ಇಂದಿನ ಶಿಕ್ಷಣವು ಬಹು ಶಿಸ್ತಿನ ಕೌಶಲ್ಯಗಳಿಂದ ಕೂಡಿರಬೇಕು. ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡಿದರೆ ಅದೊಂದು ಮೈಲುಗಲ್ಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 2024-25ನೇ ಸಾಲಿನ ಬಿಎಸ್ಸಿ ಹಾಗೂ ಬಿಸಿಎ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕೆ ಎಲ್ ಇ ಸಂಗೀತ ವಿಶ್ವವಿದ್ಯಾಲಯದ ಪ್ರೊ. ಸವಿತಾ ಪಾಟೀಲ ಹಾಗೂ ಸಂಗಡಿಗರು ನಾಡಗೀತೆಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಹಾಡಿದರುಪ್ರೊ. ಪೂಜಾ ಮತ್ತು ಪ್ರೊ. ಮಹಾದೇವಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.ಈ ಭವ್ಯ ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಆಜೀವ ಸದಸ್ಯರು, ಪ್ರಾಧ್ಯಾಪಕ ವೃಂದದವರು, ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
