• ಬೆಳಗಾವಿಯಲ್ಲಿ ಭಾರಿ ಅಬಕಾರಿ ಬೇಟೆ ಯಶಸ್ವಿ
• ಖಾನಾಪುರ ರಸ್ತೆಯಲ್ಲಿ ಭಾರಿ ಸ್ಪಿರಿಟ್ ವಶ
• 35 ಲಕ್ಷ ರೂ. ಮೌಲ್ಯದ ಸೊತ್ತು ಜಪ್ತಿ
• ಮೈಸೂರು ಮೂಲದ ಲಾರಿ ಚಾಲಕನಿಗೆ ನೋಟಿಸ್

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭಾರಿ ಪ್ರಮಾಣದ ಅಕ್ರಮ ಸ್ಪಿರಿಟ್ ಸಾಗಾಟ ಜಾಲವನ್ನು ಭೇದಿಸಿದ್ದಾರೆ. ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್ ಹಾಗೂ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಸದ್ಯ ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಮೇ 19ರ ಮುಂಜಾನೆ 3:45ರ ಸುಮಾರಿಗೆ ಅಬಕಾರಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ. ಅಶೋಕ ಲೈಲ್ಯಾಂಡ್ ಕಂಪನಿಯ ಆರು ಚಕ್ರದ ಲಾರಿಯಲ್ಲಿ (KA-22-3793) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 14,000 ಲೀಟರ್ ಮದ್ಯಸಾರವನ್ನು (ಸ್ಪಿರಿಟ್) ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಿನವಾಳು ಗ್ರಾಮದ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ (47) ಎಂಬಾತನಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರ ಅಡಿಯಲ್ಲಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದ್ದು, ವಾಹನದ ಅಸಲಿ ಮಾಲೀಕನ ಪತ್ತೆಗಾಗಿ ಜಾಲ ಬೀಸಲಾಗಿದೆ.
ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಉಪ ಅಧೀಕ್ಷಕ ರವಿ ಎಂ. ಮುರಗೋಡ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ ಮೆಟ್ಟಗೇರಿ ಅವರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಲಾದ 14 ಲಕ್ಷ ರೂ. ಮೌಲ್ಯದ ಸ್ಪಿರಿಟ್, 21 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಚಾಲಕನ ಮೊಬೈಲ್ ಸೇರಿ ಒಟ್ಟು 35,01,500 ರೂಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಈ ಯಶಸ್ವಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕರಾದ ನೂರುಲ್ಲಾ ಖಾನ್, ಸುನೀಲ ಎಸ್. ಪಾಟೀಲ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಬಳಗಪ್ಪನವರ, ವೈ. ಬಿ. ಪಾಟೀಲ, ಬಸವರಾಜ ವಿವೇಕಿ ಮತ್ತು ಚಾಲಕ ಪ್ರಕಾಶ ನಂದಿ ಪಾಲ್ಗೊಂಡಿದ್ದರು ಎಂದು ಅಬಕಾರಿ ಉಪ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

