• ಬೆಳಗಾವಿ ಸಿಕಂದರಾಬಾದ್ ನೂತನ ರೈಲಿಗೆ ಚಾಲನೆ
• ಹಸಿರು ನಿಶಾನೆ ತೋರಿದ ಜಗದೀಶ್ ಶೆಟ್ಟರ್
• ವಾರಕ್ಕೆ ಮೂರು ಬಾರಿ ರೈಲು ಸಂಚಾರ
• ಬೆಳಗಾವಿ ಜನರ ಕೂಗಿಗೆ ಕೇಂದ್ರ ಸ್ಪಂದನೆ

ಕುಂದಾನಗರಿ ಬೆಳಗಾವಿಯ ರೈಲ್ವೆ ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಬೆಳಗಾವಿ – ಸಿಕಂದರಾಬಾದ್ ನೂತನ ಸಾಪ್ತಾಹಿಕ ರೈಲು ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಬೆಳಗಾವಿ ರೈಲು ನಿಲ್ದಾಣದಲ್ಲಿ ಇಂದು ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು ನೂತನ ರೈಲಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ಮಾತನಾಡಿದ ಅವರು, ಬೆಳಗಾವಿಯಿಂದ ಹೈದರಾಬಾದ್ ಹಾಗೂ ಸಿಕಂದರಾಬಾದ್ ಸೇರಿದಂತೆ ಒಟ್ಟು ಮೂರು ಹೊಸ ರೈಲುಗಳ ಸೇವೆ ಆರಂಭಗೊಳ್ಳುತ್ತಿದ್ದು, ಇವು ವಾರಕ್ಕೆ ಮೂರು ಬಾರಿ ಸಂಚರಿಸಲಿವೆ ಎಂದರು. ಕಳೆದ ಎರಡು ವರ್ಷಗಳಿಂದ ಈ ರೈಲು ಸೇವೆಗಳಿಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದೀಗ ಬೆಳಗಾವಿ ಜನರ ಕೂಗಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರಿಗೆ ಬೆಳಗಾವಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶೆಟ್ಟರ್ ತಿಳಿಸಿದರು. ಈ ಮಹತ್ವದ ಸುಸಂದರ್ಭದಲ್ಲಿ ಸ್ಥಳೀಯ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದು ಸಾಕ್ಷಿಯಾದರು.
ಇದೇ ವೇಳೆ ಜಿಲ್ಲೆಯ ರೈಲ್ವೆ ಪ್ರಗತಿಯ ಕುರಿತು ಮಾತನಾಡಿದ ಸಂಸದರು, ಈಗಾಗಲೇ ಬೆಳಗಾವಿ – ಬೆಂಗಳೂರು ವಂದೇ ಭಾರತ ರೈಲು ಸೇವೆ ಯಶಸ್ವಿಯಾಗಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನಿಂದ ಮುಂಬೈಗೆ ತೆರಳುವ ಹೈಸ್ಪೀಡ್ ರೈಲಿಗೂ ಚಾಲನೆ ಸಿಕ್ಕಿರುವುದು ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲಕರವಾಗಲಿದೆ. ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ ಚನ್ನೈ ಹಾಗೂ ತಿರುಪತಿ ರೈಲು ಸೇವೆಗಳನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ಮುಖಂಡರು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರು ಆಗಮಿಸಿದ್ದರು.

