Belagavi

ಉಗ್ರರ ಅಟ್ಯಾಕ್ ಎದುರಿಸಲು ಖಾಕಿ ಪಡೆ ಸಜ್ಜು ಬೆಳಗಾವಿಯಲ್ಲಿ ಗರುಡಾ ಫೋರ್ಸ್‌ನಿಂದ ಹೈ-ಅಲರ್ಟ್ ತರಬೇತಿ

Share

• ಬೆಳಗಾವಿಯಲ್ಲಿ ಖಾಕಿ ಪಡೆಗೆ ಹೈಟೆಕ್ ತರಬೇತಿ
• ಉಗ್ರರ ದಾಳಿ ನಿಭಾಯಿಸಲು ವಿಶೇಷ ರಣತಂತ್ರ
• ಗರುಡಾ ಫೋರ್ಸ್‌ನಿಂದ ಪೊಲೀಸರಿಗೆ ಲೈವ್ ಡೆಮೋ
• ಪೊಲೀಸ್ ಕವಾಯತ್ತು ಮೈದಾನದಲ್ಲಿ ಅಣಕು ಪ್ರದರ್ಶನ

ರಾಜ್ಯದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ನಮ್ಮ ಪೊಲೀಸ್ ಪಡೆ ಹೈಪರ್ ಆಕ್ಟಿವ್ ಆಗಿದೆ. ಇದೀಗ ಉಗ್ರರ ದಾಳಿಯಂತಹ ಕಠಿಣ ಸವಾಲುಗಳನ್ನು ಸದೆಬಡಿಯಲು ಬೆಂಗಳೂರಿನ ಗರುಡಾ ಫೋರ್ಸ್ ಕಮಾಂಡೋಗಳು, ಬೆಳಗಾವಿ ವಿಭಾಗದ ಪೊಲೀಸರಿಗೆ ವಿಶೇಷ ರಣತಂತ್ರದ ತರಬೇತಿ ನೀಡಿದ್ದಾರೆ.
ಬೆಳಗಾವಿಯ ಜಿಲ್ಲಾ ಪೊಲೀಸ್ ಕವಾಯತ್ತು ಮೈದಾನದಲ್ಲಿ ಗರುಡಾ ಫೋರ್ಸ್ ಇಂಡಿಕೇಷನ್ ಡ್ರೈವ್ ನೇತೃತ್ವದಲ್ಲಿ ಈ ಹೈ-ವೋಲ್ಟೇಜ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದ ಅತ್ಯುನ್ನತ ಕಮಾಂಡೋ ಪಡೆಯ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಗರುಡಾ ಫೋರ್ಸ್ ಅಧಿಕಾರಿಗಳು, ಬೆಳಗಾವಿ ವಿಭಾಗದ ಪೊಲೀಸ್ ಸಿಬ್ಬಂದಿಗೆ ಶತ್ರುಗಳನ್ನು ಸದೆಬಡಿಯುವ ತಂತ್ರಗಳನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು. ಅಪರಾಧ ಕೃತ್ಯಗಳು, ವಿಧ್ವಂಸಕ ಕೃತ್ಯಗಳು ಹಾಗೂ ಉಗ್ರರ ಆಕಸ್ಮಿಕ ದಾಳಿಗಳನ್ನು ಎದುರಿಸುವಾಗ ಸ್ಥಳದಲ್ಲೇ ಕೈಗೊಳ್ಳಬೇಕಾದ ತಕ್ಷಣದ ನಿರ್ಧಾರಗಳು ಮತ್ತು ಕೌಂಟರ್ ಅಟ್ಯಾಕ್ ತಂತ್ರಗಳ ಬಗ್ಗೆ ಸವಿಸ್ತಾರವಾದ ಮಾರ್ಗದರ್ಶನ ನೀಡಲಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಗರುಡಾ ಫೋರ್ಸ್‌ನ ಪರಿಣಿತರ ತಂಡವು ಈ ವಿಶೇಷ ಕಾರ್ಯಾಚರಣೆಯ ಯೂನಿಟ್‌ಗಳನ್ನು ಮುನ್ನಡೆಸಿತು. ಕವಾಯತ್ತು ಮೈದಾನದಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ಒತ್ತೆಯಾಳುಗಳ ರಕ್ಷಣೆ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ವಿವಿಧ ಪೊಲೀಸ್ ವಿಭಾಗಗಳ ನಡುವೆ ಇರಬೇಕಾದ ಸಮನ್ವಯತೆಯ ಬಗ್ಗೆ ಲೈವ್ ಡೆಮೋ ನೀಡಲಾಯಿತು.
ಬೆಳಗಾವಿ ವಿಭಾಗದ ನೂರಾರು ಪೊಲೀಸ್ ಅಧಿಕಾರಿಗಳು ಈ ಕಠಿಣ ತರಬೇತಿಯಲ್ಲಿ ಪಾಲ್ಗೊಂಡು ತಮ್ಮ ರಕ್ಷಣಾ ಕೌಶಲ್ಯವನ್ನು ಮತ್ತಷ್ಟು ಬಲಪಡಿಸಿಕೊಂಡರು.

Tags:

error: Content is protected !!