baglkote

ಬಾಗಲಕೋಟೆಯಲ್ಲಿ ವರುಣನ ಆರ್ಭಟ: ಸಿಡಿಲು ಬಡಿದು ರೈತನ ಎರಡು ಎಮ್ಮೆಗಳು ದುರ್ಮರಣ!

Share

ಬಾಗಲಕೋಟೆಯಲ್ಲಿ ಗಾಳಿ ಸಹಿತ ಭಾರಿ ಮಳೆ ಆರ್ಭಟ
ತುಳಸಿಗೇರಿಯಲ್ಲಿ ಸಿಡಿಲಿಗೆ ಎರಡು ಎಮ್ಮೆಗಳು ಬಲಿ
ಮರದ ಕೆಳಗೆ ಕಟ್ಟಿದ್ದ ಎಮ್ಮೆಗಳು ದುರ್ಮರಣ
ಬಾಧಿತ ರೈತನಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ಬಾಗಲಕೋಟೆ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿನ ಆಘಾತಕ್ಕೆ ಎರಡು ಎಮ್ಮೆಗಳು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮರದ ಕೆಳಗೆ ಕಟ್ಟಿದ್ದ ಎಮ್ಮೆಗಳ ಮೇಲೆ ಸಿಡಿಲು ಬಿದ್ದಿದ್ದು, ತುತ್ತು ಅನ್ನ ನೀಡುತ್ತಿದ್ದ ಮೂಕಪ್ರಾಣಿಗಳನ್ನು ಕಳೆದುಕೊಂಡು ರೈತ ಕಣ್ಣೀರುಡುತ್ತಿದ್ದಾನೆ.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಗಾಳಿ-ಮಳೆಯ ರೌದ್ರಾವತಾರಕ್ಕೆ ಮುತ್ತಪ್ಪ ವಾಲಿಕಾರ ಎಂಬುವವರಿಗೆ ಸೇರಿದ ಎರಡು ಎಮ್ಮೆಗಳು ಬಲಿಯಾಗಿವೆ. ಗ್ರಾಮದಲ್ಲಿ ಹಠಾತ್ತನೆ ಸುರಿದ ಬಿರುಗಾಳಿ ಮಳೆಯಿಂದ ರಕ್ಷಿಸಿಕೊಳ್ಳಲು ಎಮ್ಮೆಗಳನ್ನು ಮರದ ಕೆಳಗೆ ಕಟ್ಟಲಾಗಿತ್ತು. ಈ ವೇಳೆ ದುರದೃಷ್ಟವಶಾತ್ ಸಿಡಿಲು ನೇರವಾಗಿ ಮರಕ್ಕೆ ಬಡಿದು, ನಂತರ ಅದರ ತೀವ್ರತೆಗೆ ಮರದ ಕೆಳಗಿದ್ದ ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಎಮ್ಮೆಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತ ಮುತ್ತಪ್ಪ ವಾಲಿಕಾರ ಸದ್ಯ ಆರ್ಥಿಕವಾಗಿ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರದ ಬಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಬಳಿ ಗ್ರಾಮಸ್ಥರು ಹಾಗೂ ರೈತರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

Tags:

error: Content is protected !!