• ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ
• ದಲಿತ ಸಂಘರ್ಷ ಸಮಿತಿಯಿಂದ ಮನವಿ
• ಕಾಡಂಚಿನ ಸಮುದಾಯಗಳ ಅಭಿವೃದ್ಧಿಗೆ ತೀವ್ರ ಒತ್ತಾಯ
• ಸ್ಮಶಾನ ಭೂಮಿ ಅತಿಕ್ರಮಣ ತೆರವುಗೊಳಿಸಲು ಆಗ್ರಹ

ಖಾನಾಪುರ ತಾಲೂಕಿನ ಕಾಡಂಚಿನ ಹಕ್ಕಿಪಿಕ್ಕಿ ಮತ್ತು ಕಾಟಕರಿ ಸಮುದಾಯಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಣ ಹಾಗೂ ಶಾಶ್ವತ ನೆಲೆ ಕಲ್ಪಿಸಬೇಕು ಮತ್ತು ಡೋಂಬಾರಾ ಸಮಾಜದ 100 ವರ್ಷಗಳ ಹಳೆಯ ಸ್ಮಶಾನ ಭೂಮಿಯ ಅತಿಕ್ರಮಣವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸಮಿತಿಯ ಮುಖಂಡರಾದ ರಾಜಶೇಖರ್ ಹಿಂಡಲಗಿ ಹಾಗೂ ಮಲ್ಲೇಶ್ ಚೌಗಲೆ ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರ ಉಪಸ್ಥಿತಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಯನ್ನು ಸಲ್ಲಿಸಿದರು.
ಖಾನಾಪೂರ ತಾಲೂಕಿನ ಕಾಡಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯಗಳಿಗೆ ಮತ್ತು ಕಾಟಕರಿ ಸಮುದಾಯಗಳಿಗೆ ಮೂಲಭೂತ ಸೌಲಭ್ಯ, ಶಾಶ್ವತ ನೆಲೆ, ವೈದ್ಯಕೀಯ ಸೇವೆ, ಶಿಕ್ಷಣ ನೀಡಬೇಕು. ಅಲ್ಲದೇ ಡೋಂಬಾರಾ ಸಮಾಜದ 100 ವರ್ಷಗಳ ಹಳೆದ ಸ್ಮಶಾನಭೂಮಿ ಅತಿಕ್ರಮಣದ ವಿರುದ್ದ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಹಿಂಡಲಗಿ ಅವರು ಹೇಳಿದರು.
ಇನ್ನು ದಲಿತ ಮುಖಂಡ ಮಲ್ಲೇಶ್ ಚೌಗಲೆ ಅವರು ಖಾನಾಪುರ ತಾಲೂಕಿನಲ್ಲಿ ಡೋಂಬಾರಾ ಸಮಾಜದ 100 ವರ್ಷಗಳ ಇತಿಹಾಸವಿರುವ ಸ್ಮಶಾನವನ್ನು ಅತಿಕ್ರಮಣಗೊಳಿಸಿಕೊಂಡಿದ್ದಾರೆ. ಅದನ್ನ ತೆರವುಗೊಳಿಸಬೇಕು. ಹಕ್ಕಿಪಿಕ್ಕಿ, ಕಾಟಕರಿ ಜನಾಂಗಗಳಿಗೆ ಸಂವಿಧಾನಬದ್ಧ ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
