ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಎಂ ಬದಲಾವಣೆ ಆಲದ ಮರ ಚಿಗುರೊಡೆದಿದೆ. ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶದ ಬೆನ್ನಲ್ಲೇ ಸಚಿವ ಕೆ.ಎನ್. ರಾಜಣ್ಣ ತುಮಕೂರಿನಲ್ಲಿ ಹಿರಿಯ ನಾಯಕ ಜಿ. ಪರಮೇಶ್ವರ್ ಪರ ಬ್ಯಾಟ್ ಬೀಸುವ ಮೂಲಕ ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ. ಕೇರಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಾಯಕರ ಭೇಟಿ ಬೆನ್ನಲ್ಲೇ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯ ಸರ್ಕಾರದ ಮೂರನೇ ವರ್ಷದ ಸಾಧನಾ ಸಮಾವೇಶದ ಬೆನ್ನಲ್ಲೇ ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸಿಎಂ ಬದಲಾವಣೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದಲಾವಣೆಯಾದರೆ ಆ ಸ್ಥಾನಕ್ಕೆ ಜಿ. ಪರಮೇಶ್ವರ್ ಅವರೇ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮ ಆಶಯ ಎಂದು ರಾಜಣ್ಣ ಬಹಿರಂಗವಾಗಿ ಹೇಳಿದ್ದಾರೆ. ಪರಮೇಶ್ವರ್ ಅವರು ಹಿಂದೆ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ದುಡಿದಿದ್ದಾರೆ, 2013ರಲ್ಲೇ ಗೆದ್ದಿದ್ದರೆ ಅವರೇ ಸಿಎಂ ಆಗುತ್ತಿದ್ದರು. ಹೀಗಾಗಿ ಅವರ ಹಳೆಯ ಕೂಲಿ ಇನ್ನೂ ಬಾಕಿ ಉಳಿದಿದೆ ಎಂದು ನೆನಪಿಸಿದ ರಾಜಣ್ಣ, ಅಧಿಕಾರ ಎಂಬುದು ಸಿದ್ದರಾಮಯ್ಯನವರ ಅಥವಾ ಇನ್ನೊಬ್ಬರ ಮನೆಯ ಆಸ್ತಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಎನ್ನುವುದು ಜನ ನೀಡುವ ಭಿಕ್ಷೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕೇರಳ ಪ್ರವಾಸದ ವೇಳಾಪಟ್ಟಿಯನ್ನು ಉಲ್ಲೇಖಿಸಿದ ಸಚಿವರು, ಇಂದು ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ನಿರ್ಧಾರವಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿಗಳು ಬೆಳಗ್ಗೆ ಕೇರಳದ ಪ್ರಮಾಣವಚನ ಕಾರ್ಯಕ್ರಮ ಮುಗಿದ ಬಳಿಕವೂ ಮಧ್ಯಾಹ್ನ 3 ಗಂಟೆಯವರೆಗೆ ತಿರುವನಂತಪುರದಲ್ಲೇ ಉಳಿಯಲಿದ್ದಾರೆ. ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಇರಲಿದ್ದಾರೆ. ಎಲ್ಲ ನಾಯಕರು ಒಟ್ಟಿಗೆ ಇರುವುದರಿಂದ ಕೇವಲ ಐದು ನಿಮಿಷಗಳ ಚರ್ಚೆಯಲ್ಲಿ ಸಿಎಂ ಬದಲಾವಣೆ ಕುರಿತು ಅಂತಿಮ ಅಭಿಪ್ರಾಯಕ್ಕೆ ಬರಬಹುದು ಹಾಗೂ ರಾಹುಲ್ ಗಾಂಧಿ ಅವರ ಬಾಯಿಂದ ಬರುವ ತೀರ್ಮಾನವೇ ಇವತ್ತೇ ಫೈನಲ್ ಆಗಬಹುದು ಎಂಬುದು ನನ್ನ ವೈಯಕ್ತಿಕ ನಿರೀಕ್ಷೆಯಾಗಿದೆ ಎಂದು ರಾಜಣ್ಣ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
